ಸುಮಿಯಿಂದಲೂ ಭಾರತೀಯರು ಬಚಾವ್: ಮುಂದುವರಿದ ರಷ್ಯಾ-ಯೂಕ್ರೇನ್ ಸಂಘರ್ಷ

Nation
ಸಂಘರ್ಷ ಪೀಡಿತ ಸುಮಿಯಿಂದ ಪೋಲ್ಟವಾಕ್ಕೆ ಸ್ಥಳಾಂತರ ಗೊಳ್ಳುವ ವೇಳೆ ಚಹಾಪಾನ ಮಾಡಿದ ಭಾರತೀಯರು
Published on
ರಷ್ಯಾ-ಯೂಕ್ರೇನ್ ಯುದ್ಧ 13ನೇ ದಿನವೂ ಮುಂದುವರಿದಿದ್ದು, ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕಾಗಿ ಕದನವಿರಾಮ ಘೋಷಿಸಲಾಗಿದೆ. ಮಾನವೀಯ ಕಾರಿಡಾರ್ ನಿರ್ವಿುಸಿ ಸಂಘರ್ಷ ಪೀಡಿತ ಸ್ಥಳದಲ್ಲಿ ಇದ್ದವರನ್ನು ಬೇರೆಡೆಗೆ ರವಾನಿಸಲಾಗಿದೆ. ಈ ಪೈಕಿ ಸುಮಿಯಲ್ಲಿದ್ದ 694 ಭಾರತೀಯರೂ ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ, ಪಾಶ್ಚಿಮಾತ್ಯ ದೇಶಗಳು ನೆರವಿಗೆ ಬರುತ್ತಿಲ್ಲ ಎಂದು ಯೂಕ್ರೇನ್ ಅಧ್ಯಕ್ಷ ಝೆಲೆನ್​ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಿಗೆ ರಷ್ಯಾದಿಂದ ತೈಲ ಆಮದನ್ನು ಅಮೆರಿಕ-ಜಪಾನ್​ಗಳು ನಿಲ್ಲಿಸುವ ನಿರ್ಧಾರ ಮಾಡಿವೆ.

ಕಿಯೆವ್/ಮಾಸ್ಕೊ/ನವದೆಹಲಿ: ಸಮರ ಪೀಡಿತ ಯೂಕ್ರೇನ್​ನ ಸುಮಿಯಲ್ಲಿ ಸಿಲುಕಿದ್ದ 694 ಭಾರತೀಯರನ್ನು ಗ್ರೀನ್ ಕಾರಿಡಾರ್ ಮೂಲಕ ಸುರಕ್ಷಿತವಾಗಿ ಅಲ್ಲಿಂದ ಸ್ಥಳಾಂತರಿಸಲಾಗಿದೆ. ಪೋಲ್ಟವಾಕ್ಕೆ ಅವರೆಲ್ಲರೂ ಬಸ್​ನಲ್ಲಿ ಕಳುಹಿಸಲಾಗಿದೆ. ಸೋಮವಾರ ರಾತ್ರಿ ಈ ಕಾರ್ಯಾಚರಣೆ ನಡೆದಿತ್ತು. ಭಾರತೀಯ ರಾಯಭಾರ ಕಚೇರಿ ಮತ್ತು ರೆಡ್ ಕ್ರಾಸ್ ಬೆಂಗಾವಲು ಪಡೆಯೊಂದಿಗೆ 12 ಬಸ್​ಗಳಲ್ಲಿ ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶೀಯರು ಮತ್ತು ನೇಪಾಳಿಗಳನ್ನೂ ಕೂಡ ಸ್ಥಳಾಂತರಗೊಳಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್​ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೋಮವಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಮತ್ತು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರ ಜತೆಗೆ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಪ್ರತಿಕ್ರಿಯಿಸಿದ್ದು, ಸುಮಿಯಿಂದ ಎಲ್ಲ ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿ ಆಗಿದ್ದೇವೆ. ಎಲ್ಲರೂ ಪೋಲ್ಟಾವಕ್ಕೆ ತೆರಳಿ ಅಲ್ಲಿಂದ ರೈಲಿನ ಮೂಲಕ ಪಶ್ಚಿಮ ಯೂಕ್ರೇನ್ ಹೋಗುತ್ತಾರೆ. ಬಳಿಕ ವಿಮಾನದ ಮೂಲಕ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಇದಕ್ಕೂ ಮುನ್ನ ಸುಮಿಯಿಂದ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅದಕ್ಕೆ ಬೇಕಾದ ಗ್ರೀನ್ ಕಾರಿಡಾರ್ ರಚನೆಯಾಗಿಲ್ಲ ಎಂದು ಭಾರತ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಹೇಳಿತ್ತು.

ಸ್ಥಳಾಂತರ ವಿವರ ನೀಡಿದ ಸ್ಥಳೀಯರು: ಸುಮಿಯಿಂದ ಪೋಲ್ಟವಾಗೆ ವಿದೇಶೀಯರ ಸ್ಥಳಾಂತರಕ್ಕೆ ಗ್ರೀನ್ ಕಾರಿಡಾರ್ ರಚಿಸಲಾಗಿತ್ತು. ಇದರಲ್ಲಿ ಭಾರತ, ಚೀನಾ ಮತ್ತು ಇತರೆ ದೇಶಗಳ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ರಷ್ಯಾಕ್ಕೆ ತೆರಳಿ ಅಲ್ಲಿಂದ ಸ್ವದೇಶಕ್ಕೆ ತೆರಳುವಂತೆ ರಷ್ಯಾ ಅನೇಕ ವಿದ್ಯಾರ್ಥಿಗಳಿಗೆ ಮನವಿ ಮಾಡಿತ್ತು. ಕೆಲವರಷ್ಟೆ ರಷ್ಯಾಕ್ಕೆ ತೆರಳಿ ಅಲ್ಲಿಂದ ಸ್ವದೇಶಕ್ಕೆ ತೆರಳಲು ಸಿದ್ಧರಾದರು. ಉಳಿದವರೆಲ್ಲ ಪೋಲ್ಟವಾಗೆ ತೆರಳಿದರು ಎಂದು ಸ್ಥಳೀಯರು ಮಾಧ್ಯಮಗಳಿಗೆ ತಿಳಿಸಿದ್ದಾಗಿ ವರದಿಯಾಗಿದೆ.

75 ಭಾರತೀಯ ನಾವಿಕರ ಸ್ಥಳಾಂತರ: ಯೂಕ್ರೇನ್​ನ ವಾಣಿಜ್ಯ ಬಂದರು ಮೈಕೋಲೈವ್​ನಲ್ಲಿ ಸಿಲುಕಿದ್ದ ಭಾರತದ 75 ನಾವಿಕರನ್ನು ಸೋಮವಾರ ಸ್ಥಳಾಂತರಿಸಲಾಗಿದೆ. ಇದಲ್ಲದೆ 2 ಲೆಬನೀಸ್ ಮತ್ತು 3 ಸಿರಿಯನ್ ಸೇರಿ 57 ನಾವಿಕರ ಸ್ಥಳಾಂತರಕ್ಕೆ ಮಂಗಳವಾರ ಬಸ್ ವ್ಯವಸ್ಥೆ ಆಗಿದೆ ಎಂದು ಮೂಲಗಳು ತಿಳಿಸಿವೆ. ಮಂಗಳವಾರ ಎರಡು ವಿಮಾನಗಳಲ್ಲಿ 410 ಭಾರತೀಯರು ಸ್ವದೇಶಕ್ಕೆ ಬಂದಿದ್ದು, ಇದುವರೆಗೆ ಸುಮಾರು 18,000 ಭಾರತೀಯರನ್ನು ಯೂಕ್ರೇನ್​ನಿಂದ ಸ್ಥಳಾಂತರಿಸಿದಂತಾಗಿದೆ.

ಭಾರತದ ಮೇಲೆ ಅಮೆರಿಕ ನಿರ್ಬಂಧ?: ವಿಶ್ವಸಂಸ್ಥೆಯಲ್ಲಿ ಅಮೆರಿಕ ಪರವಾಗಿ ನಿರ್ಣಯ ತೆಗೆದುಕೊಳ್ಳದ ಭಾರತದ ವಿರುದ್ಧ ಅಮೆರಿಕ ಕಠಿಣ ನಿರ್ಬಂಧ ಹೇರುವ ಸಾಧ್ಯತೆ ಇದೆ. ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಒಪ್ಪಂದ ಮಾಡಿಕೊಂಡ ಕಾರಣ ಅದು ಅಮೆರಿಕದ ಹಿತಕ್ಕೆ ವಿರುದ್ಧವಾದುದು. ಅದೂ ಅಲ್ಲದೆ, ರಷ್ಯಾ ವಿರುದ್ಧ ಅಮೆರಿಕ ನಿರ್ಬಂಧ ಹೇರಿ ಒತ್ತಡ ಹೇರುವ ಸಂದರ್ಭದಲ್ಲೂ ಭಾರತ ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸದೇ ಇರುವ ಕಾರಣ, ಅದರ ವಿರುದ್ಧ ಸಿಎಎಟಿಎಸ್​ಎ ಕಾನೂನು ಪ್ರಕಾರ ಕಠಿಣ ನಿರ್ಬಂಧ ಹೇರ ಬೇಕೆಂದು ರಿಪಬ್ಲಿಕನ್ ಸೆನೆಟರ್ ಟೆಡ್ ಕ್ರೂಝ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಪ್ರಮುಖ ವಿದ್ಯಮಾನಗಳು

  • ರಷ್ಯಾ ಮತ್ತು ಬೆಲರೂಸ್​ನ 32 ಅತಿಶ್ರೀಮಂತರು ಮತ್ತು ಪ್ರಭಾವಿಗಳ ಮೇಲೆ ಜಪಾನ್ ನಿರ್ಬಂಧ ವಿಧಿಸಿದೆ. ರಷ್ಯಾ ವಿರುದ್ಧದ ಅಂತಾರಾಷ್ಟ್ರೀಯ ನಿರ್ಬಂಧದ ಭಾಗವಾಗಿ ಜಪಾನ್ ಈ ಕ್ರಮ ಜರುಗಿಸಿದೆ.
  • ರಷ್ಯಾದಲ್ಲಿ ಜಪಾನ್​ನ ಪಾವತಿ ವ್ಯವಸ್ಥೆ ಜೆಸಿಬಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಮಾ.14ರಿಂದ ಪಾವತಿ ವ್ಯವಸ್ಥೆ ಚಾಲ್ತಿಯಲ್ಲಿರುವುದಿಲ್ಲ ಎಂದು ರಷ್ಯಾದಲ್ಲಿ ಅದು ಪ್ರಕಟಣೆ ಹೊರಡಿಸಿದೆ.
  • ರಷ್ಯಾದ ಅತಿಕ್ರಮಣದಿಂದಾಗಿ 38 ಮ್ಕಕಳು ಸೇರಿ ಕನಿಷ್ಠ 400 ನಾಗರಿಕರು ಮೃತಪಟ್ಟಿದ್ದು, 800ಕ್ಕೂ ಹೆಚ್ಚು ನಾಗರಿಕರು ಗಾಯಗೊಂಡಿದ್ದಾರೆ ಎಂದು ಯೂಕ್ರೇನ್ ರಕ್ಷಣಾ ಸಚಿವ ಒಲೆಕ್​ಸಿ ರೆಝå್ನಿಕೋವ್ ತಿಳಿಸಿದ್ದಾರೆ.
  • ಮರಿಯೋಪೋಲ್​ನಲ್ಲಿ 3 ಲಕ್ಷ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ರಷ್ಯಾ ಸೇನೆ ಇರಿಸಿಕೊಂಡಿದೆ. ಮಾನವೀಯ ನೆಲೆಯ ನಾಗರಿಕರ ಸ್ಥಳಾಂತರಕ್ಕೆ ರಷ್ಯಾ ತಡೆಯೊಡ್ಡುತ್ತಿದೆ ಎಂದು ಯೂಕ್ರೇನ್ ವಿದೇಶಾಂಗ ಸಚಿವಾಲಯ ಆರೋಪಿಸಿದೆ.
  • ಸಮರ ಪೀಡಿತ ರ್ಖಾವ್​ನಿಂದ ಇದುವರೆಗೆ 6 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಯೂಕ್ರೇನ್ ಅಧಿಕಾರಿಗಳು ದೃಢೀಕರಿಸಿದ್ದಾರೆ.
  • ನಾಗರಿಕರ ಸ್ಥಳಾಂತರ ಕಾರ್ಯದಲ್ಲಿದ್ದ ಬಸ್ ಮೇಲೆ ರಷ್ಯಾ ಸೇನೆ ದಾಳಿ ನಡೆಸಿದೆ. ಇದೇ ರೀತಿ ಕಿಯೆವ್​ನ ಸುತ್ತಲಿನ ಹಲವು ಗ್ರಾಮಗಳ ಮೇಲೂ ರಷ್ಯಾ ಸೇನೆ ಕ್ಷಿಪಣಿ ದಾಳಿ ನಡೆಸಿದೆ ಎಂದು ಯೂಕ್ರೇನ್ ಆರೋಪಿಸಿದೆ.
  • ರಷ್ಯಾದ ಶೆಲ್ ದಾಳಿಗೆ ಹೊತ್ತಿ ಉರಿದ ಜೈಟೊಮಿರ್ ತೈಲಾಗಾರ
  • 13 ದಿನ ಯುದ್ಧದಲ್ಲಿ ಯೂಕ್ರೇನ್​ನಲ್ಲಿ ಈವರೆಗೆ 202 ಶಾಲೆ, 34, ಆಸ್ಪತ್ರೆಗಳು 500 ವಸತಿ ಕಟ್ಟಡಗಳು ನೆಲಸಮ

ಸಿಇಆರ್​ಎನ್​ಯಿುಂದ ರಷ್ಯಾ ಔಟ್: ಅಂತಾರಾಷ್ಟ್ರೀಯ ವೈಜ್ಞಾನಿಕ ಸಂಶೋಧನಾಲಯ ಯೂರೋಪಿಯನ್ ಆರ್ಗನೈಸೇಷನ್ ಫಾರ್ ನ್ಯೂಕ್ಲಿಯರ್ ರಿಸರ್ಚ್ - ಸಿಇಆರ್​ಎನ್​ನ ಆಬ್ಸರ್ವರ್ ಸ್ಥಾನದಿಂದ ರಷ್ಯಾವನ್ನು ಅಮಾನತುಗೊಳಿಸಲಾಗಿದೆ. ಇದನ್ನು ಖಚಿತ ಪಡಿಸಿರುವ ಸಿಇಆರ್​ಎನ್, ತನ್ನ 23 ಸದಸ್ಯ ರಾಷ್ಟ್ರಗಳು (ಯೂರೋಪ್ ರಾಷ್ಟ್ರಗಳು ಮತ್ತು ಇಸ್ರೇಲ್) ಯೂಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಖಂಡಿಸಿವೆ. ರಷ್ಯಾ, ಅಮೆರಿಕ, ಜಪಾನ್ ಮತ್ತು ಯೂರೋಪಿಯನ್ ಯೂನಿಯನ್​ನಂತೆ ಯೂಕ್ರೇನ್ ಕೂಡ 7 ಸಹ ಸದಸ್ಯ ರಾಷ್ಟ್ರಗಳಾಗಿದ್ದು, ಆಬ್ಸರ್ವರ್ ಸ್ಥಾನಮಾನ ಹೊಂದಿದೆ. ಮಂಗಳವಾರ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತೆಂದು ಹೇಳಿದೆ.

ಬಂದೂಕು ಹಿಡಿದ ಭಾರತೀಯ: ಕಿಯೆವ್​ನ ರಕ್ಷಣೆಗಾಗಿ ಟೆರಿಟೋರಿಯಲ್ ಆರ್ವಿುಗೆ ಸೇರುವಂತೆ ವಿದೇಶೀಯರಿಗೂ ಯುಕ್ರೇನ್ ಸರ್ಕಾರ ಮನವಿ ಮಾಡಿದೆ. ಇದಕ್ಕೆ ಸ್ಪಂದಿಸಿದ ಅನೇಕ ವಿದೇಶಿಯರ ಪೈಕಿ ಭಾರತದ ಒಬ್ಬ ಯುವಕ ಕೂಡ ಯೂಕ್ರೇನ್ ಸೇನೆ ಸೇರಿದ್ದಾನೆ. ತಮಿಳುನಾಡು ಮೂಲದ 21 ವರ್ಷದ ವಿದ್ಯಾರ್ಥಿ ಸೈನಿಕೇಶ್ ರವಿಚಂದ್ರನ್ ಎಂದು ಗುರುತಿಸಲಾಗಿದೆ. ಈತ ರ್ಖಾವ್​ನಲ್ಲಿ ನ್ಯಾಷನಲ್ ಏರೋಸ್ಪೇಸ್ ಯೂನಿವರ್ಸಿಟಿಯಲ್ಲಿ 2018ರಲ್ಲಿ ಕೋರ್ಸ್​ಗೆ ಸೇರಿದ್ದ. ಎತ್ತರದ ಕಾರಣಕ್ಕೆ ಈತ ಭಾರತೀಯ ಸೇನಾ ನೇಮಕ ಪ್ರಕ್ರಿಯೆಯಿಂದ ಹೊರಬಿದ್ದಿದ್ದ. ಗುಪ್ತಚರ ಮಾಹಿತಿ ಪ್ರಕಾರ, ಈತ ಜಾರ್ಜಿಯನ್ ನ್ಯಾಷನಲ್ ಲಿಗಿಯನ್ ಪ್ಯಾರಾಮಿಲಿಟರಿ ಯೂನಿಟ್​ನ ಭಾಗವಾಗಿದ್ದಾನೆ. 16,000 ನಾಗರಿಕರು ಈ ಸೇನಾ ಘಟಕದ ಭಾಗವಾಗಿದ್ದಾರೆ ಎಂದು ಯೂಕ್ರೇನ್ ಸರ್ಕಾರ ತಿಳಿಸಿದೆ.

ಕ್ಷಿಪಣಿ ದಾಳಿಗೆ 21 ಬಲಿ: ಯೂಕ್ರೇನ್​ನ ರಾಜಧಾನಿ ಕಿಯೆವ್​ನಿಂದ ಪೂರ್ವಕ್ಕೆ 350 ಕಿ.ಮೀ. ದೂರದ ಸುಮಿ ಪಟ್ಟಣದಲ್ಲಿ ವೈಮಾನಿಕ ದಾಳಿಗೆ 21 ಜನ ಸಾವನ್ನಪ್ಪಿದ್ದಾರೆ. ಈ ಪಟ್ಟಣ ರಷ್ಯಾ ಗಡಿಗೆ ಸಮೀಪದಲ್ಲಿದೆ. ಶುಮಿಯಲ್ಲಿ 500 ಕಿಲೋ ಬಾಂಬ್ ದಾಳಿ ನಡೆಸಿದ್ದರಿಂದ 2 ಮಕ್ಕಳು ಸೇರಿ 18 ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿರಾಶ್ರಿತರಾದ 20 ಲಕ್ಷ ಯೂಕ್ರೇನಿಯನ್ನರು: ರಷ್ಯಾದ ಆಕ್ರಮಣದಿಂದಾಗಿ ಯೂಕ್ರೇನ್​ನ 20 ಲಕ್ಷಕ್ಕೂ ಹೆಚ್ಚು ಜನರು ನೆರೆ ರಾಷ್ಟ್ರಗಳಲ್ಲಿ ನಿರಾಶ್ರಿತರಾಗಿ ಸೇರಿ ಕೊಳ್ಳುವಂತೆ ಆಗಿದೆ. ಪೋಲೆಂಡ್​ನಲ್ಲಿ 10 ಲಕ್ಷಕ್ಕೂ ಹೆಚ್ಚು ನಿರಾಶ್ರಿತರು ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

Z ಎಂಬ ಸಮರ ಸಂಕೇತ: Z ಎಂಬುದು ರಷ್ಯಾ ಆಕ್ರಮಣದ ಹೊಸ ಸಂಕೇತವಾಗಿ ಬಳಕೆಯಾಗತೊಡಗಿದೆ. ಈ ಸಂಕೇತ ಮೊದಲು ರಷ್ಯಾದ ಟ್ಯಾಂಕ್​ಗಳಲ್ಲಿ ಗೋಚರಿಸಿತ್ತು. ಇದಲ್ಲದೆ ಆಂಗ್ಲ ಭಾಷೆಯ ಒ, ಎಕ್ಸ್, ಎ ಮತ್ತು ವಿ ಅಕ್ಷರಗಳು ಸೇನಾ ಸಮರೋಪಕರಣಗಳ ಮೇಲೆ ರಾರಾಜಿಸುತ್ತಿವೆ.

ಅನಿಲ ಪೂರೈಕೆ ತಡೆ ಬೆದರಿಕೆ: ಯುರೋಪ್​ಗೆ ನಾರ್ಡ್ ಸ್ಟ್ರೀಮ್1 ಪೈಪ್​ಲೈನ್ ಮೂಲಕ ಪೂರೈಕೆ ಆಗುವ ನೈಸರ್ಗಿಕ ಅನಿಲವನ್ನು ತಡೆಯುವುದಾಗಿ ರಷ್ಯಾ ಬೆದರಿಕೆ ಹಾಕಿದೆ. ಯುರೋಪ್​ನ ಅನಿಲ ಮಾರುಕಟ್ಟೆಯಲ್ಲಿ ಇದು ಪರಿಣಾಮ ಬೀರಿದ್ದು, ಅನಿಲ ಬೆಲೆ ಶೇಕಡ 80 ಏರಿಕೆಯಾಗಿದೆ. ಯುರೋಪ್ ಮಾರುಕಟ್ಟೆ ನೈಸರ್ಗಿಕ ಅನಿಲಕ್ಕಾಗಿ ರಷ್ಯಾವನ್ನೇ ನೆಚ್ಚಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ ನಾರ್ಡ್ ಸ್ಟ್ರೀಮ್2 ಯೋಜನೆಯಿಂದ ಜರ್ಮನಿ ಹಿಂದೆ ಸರಿಯುವುದಾಗಿ ಹೇಳಿತ್ತು.

11,000ಕ್ಕೂ ಹೆಚ್ಚು ರಷ್ಯನ್ನರ ಹತ್ಯೆ: ಯೂಕ್ರೇನ್ ಸೇನೆ ಹೇಳುವ ಪ್ರಕಾರ 12 ದಿನಗಳ ಸಂಘರ್ಷದಲ್ಲಿ 11,000ಕ್ಕೂ ಹೆಚ್ಚು ರಷ್ಯಾ ಯೋಧರನ್ನು ಹತ್ಯೆ ಮಾಡಲಾಗಿದೆ. ಆದರೆ, 500 ಯೋಧರು ಪ್ರಾಣ ಕಳೆದುಕೊಂಡಿರುವುದಾಗಿ ರಷ್ಯಾ ಹೇಳಿಕೊಂಡಿದೆ. ಎರಡೂ ಕಡೆಯ ಪ್ರಾಣ ಹಾನಿ ಎಷ್ಟು ಎಂಬುದು ದೃಢಪಟ್ಟಿಲ್ಲ.

4,000 ರಷ್ಯಾ ಯೋಧರ ಸಾವು?: ಯೂಕ್ರೇನ್ ಮೇಲೆ ದಾಳಿ ನಡೆಸಿದ ರಷ್ಯಾ ಸೇನೆಗೆ ತೀವ್ರ ಪ್ರತಿರೋಧ ಎದುರಾದ ಕಾರಣ ಪ್ರಾಣ ಹಾನಿ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ, ಯೂಕ್ರೇನ್ ಜತೆಗಿನ ಸಮರದಲ್ಲಿ ರಷ್ಯಾ ತನ್ನ ಯೋಧರ ಪೈಕಿ 2000ದಿಂದ 4000ದಷ್ಟು ಯೋಧರನ್ನು ಕಳೆದುಕೊಂಡಿದೆ ಎಂದು ಅಮೆರಿಕದ ಪೆಂಟಗಾನ್ ಹೇಳಿದೆ.

ರಷ್ಯಾದ ತೈಲ ನಿಷೇಧಿಸಿದ ಅಮೆರಿಕ: ರಷ್ಯಾ ವಿರುದ್ಧ ಈಗಾಗಲೇ ಹಲವು ನಿರ್ಬಂಧಗಳನ್ನು ಹೇರಿರುವ ಅಮೆರಿಕ, ಈಗ ಅಲ್ಲಿಂದ ತೈಲ ಆಮದನ್ನು ನಿಷೇಧಿಸುವ ನಿರ್ಧಾರ ಕೈಗೊಂಡಿದೆ. ರಷ್ಯಾ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸಬೇಕು ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಮನವಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ತೈಲ ಆಮದುನ್ನು ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿದೇಶಾಂಗಸ ಸಚಿವಾಲಯ ಮೂಲಗಳು ತಿಳಿಸಿವೆ. ರಷ್ಯಾದಿಂದ ಪ್ರತಿನಿತ್ಯ ಸರಾಸರಿ ಒಂದು ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಅಮೆರಿಕ ಖರೀದಿಸುತ್ತದೆ. ಅಮೆರಿಕದ ಒಟ್ಟು ತೈಲ ಆಮದಿನಲ್ಲಿ ರಷ್ಯಾದಿಂದ ಪೂರೈಕೆ ಆಗುವ ಪ್ರಮಾಣ ಶೇ. 8 ಮತ್ತು ಅಮೆರಿಕ ಖರೀದಿಸುವ ಕಚ್ಚಾ ತೈಲ ರಷ್ಯಾದ ಒಟ್ಟಾರೆ ತೈಲ ರಫ್ತಿನಲ್ಲಿ ಶೇ. 5ರಷ್ಟಾಗಿದೆ.

  • ರಷ್ಯಾ ಕಂಪನಿಗಳಿಂದ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಯನ್ನು ನಿಲ್ಲಿಸುವು ದಾಗಿ ಮತ್ತು ರಷ್ಯಾದಲ್ಲಿ ಸರ್ವೀಸ್ ಸ್ಟೇಷನ್ ಮುಚ್ಚುವುದಾಗಿ ಪೆಟ್ರೋಲಿಯಂ ಉತ್ಪನ ಮಾರಾಟ ಕ್ಷೇತ್ರದ ಅತಿದೊಡ್ಡ ಕಂಪನಿ ಶೆಲ್ ಕಂಪನಿ ತಿಳಿಸಿದೆ.
  • ರಷ್ಯಾದಿಂದ ಕಚ್ಚಾ ತೈಲ ಆಮದನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಜಪಾನ್ ಘೋಷಿಸಿದೆ.

ಮಾತುಕತೆಗೆ ಸಿದ್ಧ ಎಂದ ಝೆಲೆನ್​ಸ್ಕಿ: ಒಂದೊಮ್ಮೆ ಜಗತ್ತು ಒಂದೆಡೆ ನಿಂತುಕೊಂಡರೆ ರಷ್ಯಾ ಎಂದೆಂದಿಗೂ ಕ್ರಿಮಿಯಾ ಮತ್ತು ಡಾನ್​ಬಾಸ್ ಅನ್ನು ಕಳೆದುಕೊಳ್ಳಬೇಕಾದೀತು. ಎಲ್ಲದಕ್ಕೂ ಮಿಗಿಲಾಗಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಇದೆ. ಇದಕ್ಕಾಗಿಯೇ ನಾವು ಯೂಕ್ರೇನ್​ನಲ್ಲಿ ಹೋರಾಟ ನಡೆಸುತ್ತಿರುವುದು. ಜಗತ್ತು ಕೂಡ ಇದನ್ನು ರಕ್ಷಿಸಬೇಕು. ಕ್ರಿಮಿಯಾ ಮತ್ತು ಡಾನ್​ಬಾಸ್​ನ ಸ್ಟೇಟಸ್​ಗೆ ಸಂಬಂಧಿಸಿ ರಷ್ಯಾ ಜತೆಗೆ ಮಾತುಕತೆ ನಡೆಸುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಹೇಳಿದರು.

ಪಾಶ್ಚಾತ್ಯ ರಾಷ್ಟ್ರಗಳ ಬಗ್ಗೆ ಅಸಮಾಧಾನ: ಯೂಕ್ರೇನ್​ನ ಪಟ್ಟಣಗಳನ್ನು ಬಾಂಬ್ ದಾಳಿಯಿಂದ ರಕ್ಷಿಸುವುದಕ್ಕೆ ನಿರ್ಣಯ ಕೈಗೊಳ್ಳದ ಪಾಶ್ಚಾತ್ಯ ರಾಷ್ಟ್ರಗಳ ವಿಳಂಬ ನೀತಿಯ ಬಗ್ಗೆ ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮರ ಶುರುವಾಗಿ 13 ದಿನಗಳು ಕಳೆದಿವೆ. ಯೂಕ್ರೇನ್ ಪಟ್ಟಣಗಳನ್ನು ರಕ್ಷಿಸುವುದಕ್ಕೆ ಅಗತ್ಯವಾದ ನಿರ್ಣಯ ತೆಗೆದುಕೊಳ್ಳುವುದಕ್ಕೆ ಅನುಮೋದನೆ ನೀಡುವಲ್ಲಿ ಸಾಮರ್ಥ್ಯವಿದ್ದರೂ ಪಾಶ್ಚಾತ್ಯ ರಾಷ್ಟ್ರಗಳು ವಿಫಲವಾಗಿವೆ ಎಂದು ಝೆಲೆನ್​ಸ್ಕಿ ಟೀಕಿಸಿದ್ದಾರೆ.

ನಾಳೆ ಯೂಕ್ರೇನ್- ರಷ್ಯಾ ಮಾತುಕತೆ: ಟರ್ಕಿಯಲ್ಲಿ ಯೂಕ್ರೇನ್ ಮತ್ತು ರಷ್ಯಾದ ವಿದೇಶಾಂಗ ಸಚಿವರ ಮಟ್ಟದ ಸಭೆ ಮಾ.10ಕ್ಕೆ ನಡೆಯಲಿದೆ. ಇದು ನಾಲ್ಕನೇ ಸುತ್ತಿನ ಮಾತುಕತೆಯಾಗಿರಲಿದೆ. ಸೋಮವಾರ ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ನಾಗರಿಕರ ಸುರಕ್ಷಿತ ಸ್ಥಳಾಂತರದ ವಿಚಾರ ಪ್ರಸ್ತಾಪವಾಗಿತ್ತು. ಆದರೆ ಯಾವುದೇ ಗಟ್ಟಿ ಫಲಿತಾಂಶವಿಲ್ಲದೆ ಮಾತುಕತೆ ಕೊನಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ನಿರ್ಬಂಧದ ಆಚೆ-ಈಚೆ...

ಯೂಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ವಿರುದ್ಧ ಅಮೆರಿಕ, ಬ್ರಿಟನ್ ಮತ್ತು ಯುರೋಪ್ ಒಕ್ಕೂಟ ಈಗಾಗಲೇ ಆರ್ಥಿಕ ನಿರ್ಬಂಧ ವಿಧಿಸಿವೆ. ಈ ಕ್ರಮಗಳಲ್ಲಿ ರಫ್ತು ನಿರ್ಬಂಧ, ವ್ಯಾಪಾರ ನಿರ್ಬಂಧ, ಆಸ್ತಿ ಮುಟ್ಟುಗೋಲು ಮುಂತಾದವು ಸೇರಿವೆ. ಇದರಿಂದಾಗುವ ಪರಿಣಾಮ ಇತ್ಯಾದಿ ಕುರಿತು ಕಿರು ಅವಲೋಕನ ಇಲ್ಲಿದೆ.

  • ಆರ್ಥಿಕ ನಿರ್ಬಂಧ ಎಂದರೆ...: ಯಾವುದೇ ರಾಷ್ಟ್ರ ವ್ಯೂಹಾತ್ಮಕ ನೀತಿಯನ್ನು ಅನುಸರಿಸುವಾಗ ಅದನ್ನು ಪರಿಷ್ಕರಿಸುವುದಕ್ಕೆ ಅಥವಾ ಅದರಿಂದ ಹಿಮ್ಮೆಟ್ಟಿಸಲು ಇತರೆ ರಾಷ್ಟ್ರಗಳು ವಿಧಿಸುವ ದಂಡ, ನಿಷೇಧ, ನಿರ್ಬಂಧ ಕ್ರಮಗಳನ್ನು ಒಟ್ಟಾಗಿ ಆರ್ಥಿಕ ನಿರ್ಬಂಧ ಎನ್ನುತ್ತಾರೆ. ಇದರಲ್ಲಿ ವ್ಯಾಪಾರ, ಹಣಕಾಸು ಸಹಕಾರ, ಪಾಲುದಾರಿಕೆ ಮತ್ತು ಪ್ರಯಾಣಕ್ಕೆ ನಿರ್ಬಂಧ, ಆಸ್ತಿ ಸ್ತಂಭನ, ವ್ಯಾಪಾರ ನಿರ್ಬಂಧಗಳು ಒಳಗೊಂಡಿವೆ.
  • ಅರ್ಥವ್ಯವಸ್ಥೆ ಮೇಲೆ ಪರಿಣಾಮ: ನಿರ್ಬಂಧಿತ ಅರ್ಥವ್ಯವಸ್ಥೆಯನ್ನು ಯಾವುದೇ ರಾಷ್ಟ್ರ ಬಯಸುವುದಿಲ್ಲ. ಇದು ದೇಶದ ಪೂರೈಕೆ ಜಾಲವನ್ನು ಅಂದರೆ ಸರಕು ಮತ್ತು ಸೇವಾ ಪೂರೈಕೆಯನ್ನು ಬಾಧಿಸುತ್ತದೆ. ರಫ್ತು ಪ್ರಮಾಣಕ್ಕೂ ಹೊಡೆತ ನೀಡುತ್ತದೆ. ಬಾಹ್ಯ ಮಾರುಕಟ್ಟೆ ಬೆಂಬಲ ಇಲ್ಲದ ಕಾರಣ ಪ್ರಾದೇಶಿಕ ಮಾರುಕಟ್ಟೆ ಕೂಡ ಸೊರಗುತ್ತದೆ.
  • ರಷ್ಯಾ ಮೇಲಿನ ನಿರ್ಬಂಧ: ರಷ್ಯಾ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳ ಪೈಕಿ ರಷ್ಯಾದ ಪ್ರಮುಖ ಬ್ಯಾಂಕುಗಳ ಸ್ವಿಫ್ಟ್ ಫೈನಾನ್ಶಿಯಲ್ ಮೆಸೇಜಿಂಗ್ ಸರ್ವೀಸಸ್ ಅನ್ನು ನಿಷೇಧಿಸಿ, ಅವುಗಳ ಅಸೆಟ್ ಅನ್ನು ಸ್ತಂಭನಗೊಳಿಸಲಾಗಿದೆ. ರಷ್ಯನ್ ಡೈರೆಕ್ಟ್ ಇನ್​ವೆಸ್ಟ್​ಮೆಂಟ್ ಫಂಡ್ ಮತ್ತು ರಷ್ಯಾದ ಕೆಲವು ಅತಿಶ್ರೀಮಂತರ ಮೇಲೆ ನಿರ್ಬಂಧ ಹೇರಲಾಗಿದೆ. ಅಮೆರಿಕ, ಬ್ರಿಟನ್ ಮತ್ತು ಯುರೋಪ್ ರಾಷ್ಟ್ರಗಳು ರಫ್ತು ನಿಯಂತ್ರಣವನ್ನೂ ಹೇರಿವೆ.
  • ನಿರ್ಬಂಧದ ಪರಿಣಾಮ: ಆರ್ಥಿಕ ನಿರ್ಬಂಧಕ್ಕೆ ಗುರಿಯಾದ ರಾಷ್ಟ್ರದ ಸಾಮರ್ಥ್ಯದ ಮೇಲೆ ಇಂತಹ ನಿರ್ಬಂಧದ ಪರಿಣಾಮ ವ್ಯಕ್ತವಾಗುತ್ತದೆ. ರಷ್ಯಾವೇನು ಸಾಮಾನ್ಯ ಅರ್ಥವ್ಯವಸ್ಥೆ ಹೊಂದಿಲ್ಲ. ತೈಲ ನಿಕ್ಷೇಪ ಮತ್ತು ಅಣುಶಕ್ತಿ ಕಾರಣಕ್ಕೆ ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಇದರ ಪಾಲು ಗಮನಾರ್ಹವಾದುದು. ಸೂಕ್ಷ್ಮ ರಕ್ಷಣಾ ಸಾಮಗ್ರಿ ಪೂರೈಕೆ ಮಾಡುವಲ್ಲಿ ಕೂಡ ಪ್ರಮುಖ ಪಾತ್ರವಹಿಸಿದೆ. ಹೀಗಾಗಿ ರಷ್ಯಾಕ್ಕೆ ನಿರ್ಬಂಧದ ಬಿಸಿ ಬೇಗನೆ ತಟ್ಟದು ಎಂದು ತಜ್ಞರು ವಿಶ್ಲೇಷಿಸುತ್ತಾರೆ.
  • ಫೋಖರಣ್ -ಐಐ ನಿರ್ಬಂಧ ಹೇಗಿತ್ತು: ಪೋಖರಣ್ ಐಐ ನಡೆಸಿದ ಬಳಿಕ ಭಾರತದ ಮೇಲೆ ಕೂಡ ನಿರ್ಬಂಧ ಹೇರಲಾಗಿತ್ತು. ಭಾರತ ಅಂದು 100 ಶತಕೋಟಿ ಡಾಲರ್​ಗೂ ಅಧಿಕ ವಿದೇಶಿ ನೆರವಿನ ಮೇಲೆ ಅವಲಂಬಿಸಿತ್ತು. ಅಂದು ಭಾರತ ಅನಿವಾಸಿ ಭಾರತೀಯರಿಗೆ ಮನವಿ ಮಾಡಿ, ಸರ್ಕಾರಿ ಹೂಡಿಕೆಗಳಲ್ಲಿ 400 ಶತಕೋಟಿ ಡಾಲರ್​ಗೂ ಅಧಿಕ ಹೂಡಿಕೆಯನ್ನು ಮಾಡಿಸಿಕೊಂಡಿತ್ತು. ಈ ಮೂಲಕ ನಿರ್ಬಂಧದ ಹೊಡೆತದಿಂದ ಭಾರತ ಅಂದು ಬಚಾವಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net