ಸಂಸ್ಕೃತದ ಉಳಿವಿಗೆ ಆಗಬೇಕಿದೆ ರಚನಾತ್ಮಕ ಕೆಲಸ

sanskrit
ಸಂಸ್ಕೃತದಲ್ಲಿ ಪೂರ್ಣಾಂಕ ಪಡೆದ ಮೂವರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿ.ದತ್ತಮೂರ್ತಿ ಭಟ್, ಚಂದ್ರಪ್ಪ ಗುಂಡಪಲ್ಲಿ, ಡಾ. ಮೈತ್ರೇಯಿ ಆದಿತ್ಯಪ್ರಸಾದ್, ಡಾ. ಎಂ.ವೆಂಕಟೇಶ್, ಮಹೇಶ್ ಕಾಕತ್ಕರ್, ಕೆ.ಎನ್.ರುದ್ರಪ್ಪ ಕೊಳಲೆ ಇತರರಿದ್ದರು.
Published on

ಶಿವಮೊಗ್ಗ: ಸಂಸ್ಕೃತ ಎಲ್ಲ ಭಾಷೆಗಳಿಗೂ ತಾಯಿಯಿದ್ದಂತೆ. ಸಂಸ್ಕೃತದ ಉಳಿವಿಗೆ ರಚನಾತ್ಮಕ ಕೆಲಸವಾಗಬೇಕಿದೆ. ಈ ನಿಟ್ಟಿನಲಿ ಸಂಸ್ಕೃತ ಉಪನ್ಯಾಸಕರ ವೇದಿಕೆ ಶ್ರಮಿಸಬೇಕಿದೆ ಎಂದು ಪ್ರಭಾರ ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ತಿಳಿಸಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಸ್ಕೃತ ವೇದಿಕೆ ಹಾಗೂ ಡಿವಿಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಒಂದು ದಿನ ಸಂಸ್ಕೃತ ಪುನಶ್ಚೇತನ ಕಾರ್ಯಾಗಾರ ಉದ್ಘಾಟಿಸಿದ ಅವರು, ಸಂಸ್ಕೃತ ಉಪನ್ಯಾಸಕರು ವಿದ್ಯಾರ್ಥಿಗಳಲ್ಲಿ ಆ ಭಾಷೆಯ ಬಗ್ಗೆ ಆಸಕ್ತಿ ಮೂಡಿಸಬೇಕು ಎಂದರು.
ಡಿವಿಎಸ್ ಸಂಸ್ಥೆ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಮಾತನಾಡಿ, ಸಂಸ್ಕೃತ ಪ್ರಾಚೀನ ಭಾಷೆ ಮಾತ್ರವಲ್ಲ, ವೈಜ್ಞಾನಿಕ ಭಾಷೆಯೂ ಹೌದು. ಇಂದು ಸಂಸ್ಕೃತ ನಿಯತ ಕಾಲಿಕೆಗಳು, ಮಾಸ ಪತ್ರಿಕೆಗಳು ಪ್ರಕಟವಾಗುತ್ತಿರುವುದು ಹೆಮ್ಮೆಯ ಸಂಗತಿ. ಆಧುನಿಕ ತಂತ್ರಜ್ಞಾನದ ಅನೇಕ ಪರಿಕಲ್ಪನೆಗಳಿಗೆ ಸಂಸ್ಕೃತ ಭಾಷೆಯೇ ಪ್ರೇರಣೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಂಸ್ಕೃತ ಉಪನ್ಯಾಸಕರ ವೇದಿಕೆ ಗೌರವಾಧ್ಯಕ್ಷ ವಿ.ದತ್ತಮೂರ್ತಿ ಭಟ್ ಮಾತನಾಡಿ, ಪ್ರೌಢಶಾಲೆ ಹಾಗೂ ಪದವಿ ಪೂರ್ವ, ಪದವಿ ಮತ್ತು ಸ್ನಾತಕೋತರ ವಿಭಾಗಗಳಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಸರ್ಕಾರ ಸಂಸ್ಕೃತ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಸಹಕಾರ ನೀಡಬೇಕೆಂದರು.
ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಗಳಲ್ಲಿ ಅತ್ಯಧಿಕ ಹಾಗೂ ಸಂಸ್ಕೃತದಲ್ಲಿ 100ಕ್ಕೆ 100 ಅಂಕ ಪಡೆದ ಸಿ.ಸಹನಾ, ನೇಹಶ್ರೀ, ಶಶಾಂಕ್ ಜೋಯಿಸ್ ಅವರನ್ನು ಅಭಿನಂದಿಸಲಾಯಿತು.
ಪದವಿ ಪೂರ್ವ ಶಿಕ್ಷಣ ಇಲಾಖೆ ಶಾಖಾಧಿಕಾರಿ ಪ್ರಸನ್ನ, ಸಂಪನ್ಮೂಲ ವ್ಯಕ್ತಿಯಾಗಿ ಮಹೇಶ್ ಕಾಕತ್ಕರ್, ಪ್ರಾಚಾರ್ಯ ಡಾ. ಎಂ. ವೆಂಕಟೇಶ್, ಉಪನ್ಯಾಸಕಿ ಡಾ. ಮೈತ್ರೇಯಿ ಆದಿತ್ಯಪ್ರಸಾದ್ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net