ಸಾಲಿಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣ

17 KRN-1
ಕೆ.ಆರ್.ನಗರದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಶಾಸಕ ಡಿ.ರವಿಶಂಕರ್ ಸನ್ಮಾನಿಸಿದರು. ಜಿ.ಸುರೇಂದ್ರಮೂರ್ತಿ, ನರಗುಂದ, ನರಸಿಂಹನಾಯಕ, ಸಿ.ಸಿ.ಮಹದೇವ್, ಕಲ್ಲಹಳ್ಳಿಶ್ರೀನಿವಾಸ್, ತಿಪ್ಪೂರು ಮಹದೇವನಾಯಕ, ಶಿವುನಾಯಕ್, ಕೆ.ವಿ.ರಮೇಶ್, ಗಾರೆ ನಾಗರಾಜು ಸೇರಿದಂತೆ ಇನ್ನಿತರರು ಇದ್ದರು.
Published on

ಕೆ.ಆರ್.ನಗರ: ಪ್ರಪಂಚದಲ್ಲೇ ಪವಿತ್ರ ರಾಮಾಯಣ ಮಹಾಕಾವ್ಯದ ಮೂಲಕ ಶ್ರೀರಾಮನನ್ನು ಜಗತ್ತಿಗೆ ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಅವರು ನಿತ್ಯ ಪೂಜ್ಯರು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಮತ್ತು ತಾಲೂಕು ನಾಯಕರ ಸಂಘದ ವತಿಯಿಂದ ಗುರುವಾರ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಾನವರಾಗಿ ಜನಿಸಿ ದೈವತ್ವಕ್ಕೇರಿದ ಅವರ ಜೀವನದ ತತ್ವ ಮತ್ತು ಸಿದ್ಧಾಂತಗಳು ನಮಗೆ ಆದರ್ಶಪ್ರಾಯವಾಗಿದ್ದು, ಎಲ್ಲರೂ ಅವುಗಳನ್ನು ಪಾಲಿಸಿ ಸುಂದರ ಜೀವನ ಕಟ್ಟಿಕೊಳ್ಳಬೇಕು ಎಂದರು.

ಸಾಲಿಗ್ರಾಮ ತಾಲೂಕು ಕೇಂದ್ರದಲ್ಲಿ ನಿವೇಶನ ಕೊಡಿಸಿ 1 ಕೋಟಿ ರೂ. ಅನುದಾನ ಮಂಜೂರು ಮಾಡಿಸಿ ನಾಯಕರ ಸಮುದಾಯ ಭವನ ನಿರ್ಮಾಣ ಮಾಡಲಾಗುವುದು. ಸುಂದರ ಭವನ ನಿರ್ಮಾಣ ಮಾಡಿಸಿಕೊಡುವ ಭರವಸೆ ನೀಡಿದರಲ್ಲದೇ ಇದರ ಜತೆಗೆ ಕೆ.ಆರ್.ನಗರ ಪಟ್ಟಣದಲ್ಲಿರುವ ವಾಲ್ಮೀಕಿ ನಾಯಕರ ಸಮುದಾಯ ಭವನದ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡಲು 5 ಲಕ್ಷ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದರು.

ಕೇವಲ ಮಹನೀಯರ ಜಯಂತಿಗಳನ್ನು ಆಚರಿಸಿದರೆ ಸಾಲದು, ಅದರ ಜತೆಗೆ ಪ್ರತಿಯೊಬ್ಬರು ಅವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ನಡೆಯುವ ಜತೆಗೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರಯತ್ನಿಸಿದಾಗ ಮಾತ್ರ ಜಯಂತಿಗಳಿಗೆ ಅರ್ಥ ಬರಲಿದೆ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಶ್ರೇಷ್ಠ ಗ್ರಂಥವಾಗಿರುವ ರಾಮಾಯಣ ಮಹಾಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರ ಹೆಸರು ಅಜರಾಮರ. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರು ಜಿ.ಎಲ್.ಹಾವನೂರ ಆಯೋಗ ರಚಿಸಿ ಹಿಂದುಳಿದ ವರ್ಗದವರಿಗೆ ಎಲ್ಲ ಕ್ಷೇತ್ರಗಳಲ್ಲೂ ಅವಕಾಶ ನೀಡಿದರು. 1991ರಲ್ಲಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡರು ಅಂದಿನ ಪ್ರಧಾನ ಮಂತ್ರಿ ಚಂದ್ರಶೇಖರ್ ಅವರಿಗೆ ಶಿಪಾರಸ್ಸು ಮಾಡಿ ನಾಯಕ ಸಮಾಜವನ್ನು ಎಸ್‌ಟಿ ವರ್ಗಕ್ಕೆ ಸೇರಿಸಿದ್ದನ್ನು ಯಾರೂ ಮರೆಯಬಾರದು ಎಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ಸಂದೇಶ್, ಪುರಸಭಾ ಸದಸ್ಯರಾದ ನಟರಾಜು, ಶಂಕರ್ ಸ್ವಾಮಿ, ಮಿಕ್ಸರ್ ಶಂಕರ್ ಅವರಿಗೆ ವಾಲ್ಮೀಕಿಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೇ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು.

ಮೈಸೂರು ಮಂಡಿಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪದವೀಧರ ಶಿಕ್ಷಕ ಅಭಿಲಾಷನಾಯಕ ಉಪನ್ಯಾಸ ನೀಡಿದರು. ಕಾಂಗ್ರೆಸ್ ಎಸ್‌ಟಿ ಘಟಕದ ಉಪಾಧ್ಯಕ್ಷ ಕಲ್ಲಹಳ್ಳಿ ಶ್ರೀನಿವಾಸ್, ಕೆ.ಆರ್.ನಗರ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಸಾಲಿಗ್ರಾಮ ತಹಸೀಲ್ದಾರ್ ನರಗುಂದ, ಕೆ.ಆರ್.ನಗರ ತಾಲೂಕು ವಾಲ್ಮೀಕಿ ನಾಯಕರ ಸಂಘದ ಅಧ್ಯಕ್ಷ ನರಸಿಂಹನಾಯಕ, ಸಾಲಿಗ್ರಾಮ ತಾಲೂಕು ಅಧ್ಯಕ್ಷ ಸಿ.ಸಿ.ಮಹದೇವ್, ಕಾಂಗ್ರೆಸ್ ಎಸ್‌ಟಿ ಘಟಕದ ತಾಲೂಕು ಅಧ್ಯಕ್ಷ ತಿಪ್ಪೂರು ಮಹದೇವನಾಯಕ, ಪುರಸಭಾ ಸದಸ್ಯರಾದ ಶಿವುನಾಯಕ್, ಕೋಳಿಪ್ರಕಾಶ್, ಮುಖಂಡರಾದ ಗಾರೆನಾಗರಾಜು, ಕೆ.ವಿ.ರಮೇಶ್, ದಾಸಪ್ಪ, ಟಿಎಸ್‌ಡಬ್ಲುೃ ಎಚ್.ಎಲ್.ಶಂಕರಮೂರ್ತಿ, ಪುರಸಭಾ ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್, ಬಿಇಒ ಆರ್.ಕೃಷ್ಣಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ಕಾರ್ಯಕ್ರಮ ಆರಂಭಕ್ಕೂ ಮೊದಲು ಪಟ್ಟಣದ ಕೃಷ್ಣರಾಜೇಂದ್ರ ಪದವಿ ಪೂರ್ವ ಕಾಲೇಜು ಆವರಣದಿಂದ ಮಹರ್ಷಿ ವಾಲ್ಮೀಕಿಯವರ ಪುತ್ಥಳಿಯನ್ನು ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾತಂಡಗಳ ಜತೆಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net