

ಬೆಂಗಳೂರು: ಕೋಲಾರ ಜಿಲ್ಲೆ ಮುಳಬಾಗಿಲಿನ ಎಂ.ಜಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ಸ್ಥಳೀಯ ಮಾಜಿ ಶಾಸಕ ಹಾಲಂಗೂರು ಶ್ರೀನಿವಾಸಗೌಡ ಪುತ್ಥಳಿ ನಿರ್ಮಾಣ ಮಾಡುತ್ತಿರುವುದನ್ನು ಆಕ್ಷೇಪಿಸಿ ಸಲ್ಲಿಕೆಯಾದ ಅರ್ಜಿ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಪ್ರಕರಣ ಸಂಬಂಧ ಮುಳಬಾಗಿಲು ತಾಲೂಕು ನಾಗರೀಕ ವೇದಿಕೆ ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ ಅಂಜಾರೀಯಾ ಹಾಗೂ ನ್ಯಾಯಮೂರ್ತಿ ಕೆ. ವಿ ಅರವಿಂದ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು, ಮುಳಬಾಗಿಲಿನ ಎಂ.ಜಿ. ರಸ್ತೆಯ ಪಾದಚಾರಿ ಮಾರ್ಗದಲ್ಲಿ ಅನಧೀಕೃತವಾಗಿ ಸ್ಥಳೀಯ ಮಾಜಿ ಶಾಸಕರ ಪುತ್ಥಳಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದೆ. ಇದರಿಂದಾಗಿ ರಸ್ತೆಯಲ್ಲಿ ವಿಪರೀತ ಸಂಚಾರ ದಟ್ಟನೆ ಉಂಟಾಗುತ್ತಿದ್ದು, ಜನಸಾಮಾನ್ಯರು ತೊಂದರೆ ಎದುರಿಸಬೇಕಾಗಿದೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು.
ಮುಂದುವರಿದು, ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಸಾರ್ವಜನಿಕ ಜಾಗದಲ್ಲಿ ಈ ರೀತಿ ಪುತ್ಥಳಿ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಇದೀಗ ಕಾನೂನು ಬಾಹಿರವಾಗಿ ನಿರ್ಮಾಣ ಕಾರ್ಯ ಪ್ರಾರಂಭಗೊಂಡಿದ್ದು, ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ಪುತ್ಥಳಿ ತೆರವುಗೊಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಮನವಿ ಮಾಡಿದರು.
ವಾದ ಆಲಿಸಿದ ನ್ಯಾಯಪೀಠ ಪ್ರಕರಣ ಸಂಬಂಧ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ನೋಟಿಸ್ ಜಾರಿಗೊಳಿಸಿದೆ. ಜತೆಗೆ ಪುತ್ಥಳಿ ಸ್ಥಾಪನೆ ಕಾರ್ಯ ಮುಂದುವರಿಸಬಾರದು ಹಾಗೂ ಜಿಲ್ಲಾಧಿಕಾರಿ ಸ್ಥಳದ ಸರ್ವೇ ಮಾಡಬೇಕು ಮಾಡಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ ?
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣ ದೇಶದ ಅತಿದೊಡ್ಡ ಟೊಮೋಟೊ ಮಾರುಕಟ್ಟೆ. ತಾಲೂಕಿನ ವಿವಿಧೆಡೆಯಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ಇಲ್ಲಿಗೆ ಬರುತ್ತಾರೆ. ಸಹಸ್ರಾರು ಮಂದಿ ರೈತರು ಕೃಷಿ ಉತ್ಪನ್ನಗಳ ವ್ಯಾಪಾರ-ವಹಿವಾಟಿಗಾ ಮುಳಬಾಗಿಲು ಪಟ್ಟಣಕ್ಕೆ ಆಗಮಿಸುತ್ತಾರೆ. ಕೃಷಿ ಚಟುವಟಿಕೆ ಹೆಚ್ಚಾದಂತೆ ಪಟ್ಟಣದ ರಸ್ತೆಯಲ್ಲಿ ಸಂಚಾರ ದಟ್ಟನೆ ಉಂಟಾಗುತ್ತದೆ, ಕೆಲವೊಮ್ಮೆ ಸಂಚಾರ ಸ್ಥಗಿತವಾಗಿರುವ ಉದಾಹರಣೆಯೂ ಉಂಟು. ಈ ಹಿನ್ನೆಲೆ ಈಗಾಗಲೇ ಹಲವು ಸಂಸ್ಥೆಗಳು ರಸ್ತೆ ಅಗಲೀಕರಣದ ಬೇಡಿಕೆ ಇಟ್ಟಿದ್ದವು ಅನುದಾನದ ಕೊರತೆ ಹಾಗೂ ಇನ್ನಿತರ ಕಾರಣದಿಂದ ಬದಲಿಗೆ ಸಂಚಾರ ದಟ್ಟನೆ ಹೆಚ್ಚುತ್ತಲೆ ಇವೆ. ಈ ಬೆನ್ನೆಲ್ಲೇ ಮೇ ತಿಂಗಳಲ್ಲಿ ಸ್ಥಳೀಯ ಮಾಜಿ ಶಾಸಕ ಹಾಲಂಗೂರು ಶ್ರೀನಿವಾಸಗೌಡ ಪುತ್ಥಳಿ ಸೌಂದರ್ಯ ಸರ್ಕಲ್ ಬಳಿ ನಿರ್ಮಾಣ ಮಾಡುವಂತೆ ನಿರ್ಧರಿಸಲಾಗಿದೆ. ಈ ರೀತಿ ಪಾದಚಾರಿ ಮಾರ್ಗದಲ್ಲಿ ಪುತ್ಥಳಿ ನಿರ್ಮಾಣ ಮಾಡುವುದರಿಂದ ಜನಸಾಮಾನ್ಯರಿಗೆ ತೊಂದರೆ ಉಂಟಾಗುತ್ತದೆ. ಒಂದಿಷ್ಟು ಖಾಸಗಿ ಜನರ ಭಾವನೆ ಹಾಗೂ ಗರ್ವದ ಪ್ರತೀಕವಾಗಿ ಈ ಪುತ್ಥಳಿ ನಿರ್ಮಾಣ ಕಾರ್ಯ ತೆರವುಗೊಳಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಕೋರಲಾಗಿದೆ.