ಯಂತ್ರಗಳ ಉಪಯೋಗಿಸದ ಸ್ಥಿತಿ ನಿರ್ಮಾಣ: ಶಾಸಕ ಚನ್ನಬಸಪ್ಪಆಕ್ರೋಶ

bjp protest
ಮೆಸ್ಕಾಂ ಕಚೇರಿ ಅವರಣದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪಮಾತನಾಡಿದರು.
Published on

ಶಿವಮೊಗ್ಗ: ಬಹುತೇಕ ಕುಟುಂಬಗಳು ಗೃಹೋಪಯೋಗಿ ಯಂತ್ರಗಳ ಮೇಲೆ ಅವಲಂಬಿತವಾಗಿವೆ. ರಾಜ್ಯ ಸರ್ಕಾರ 200 ಯೂನಿಟ್‌ವರೆಗೂ ಉಚಿತವಾಗಿ ನೀಡುವುದಾಗಿ ಹೇಳಿ ಈಗ ವಿದ್ಯುತ್ ದರ ಹೆಚ್ಚಳ ಮಾಡಿ ಯಾವುದೇ ಯಂತ್ರಗಳನ್ನು ಬಳಕೆ ಮಾಡದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪಆಕ್ರೋಶ ವ್ಯಕ್ತಪಡಿಸಿದರು.

ಮೆಸ್ಕಾಂ ಕಚೇರಿ ಅವರಣದಲ್ಲಿ ಬುಧವಾರ ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ಮಹಿಳೆಯರ ಸಂಕಷ್ಟ ಅರ್ಥ ಆಗುತ್ತಿಲ್ಲ. ವಿದ್ಯುತ್ ದರ ಹೆಚ್ಚಳದಿಂದ ಕೈಗಾರಿಕೆಗಳು ಸಂಕಷ್ಟಕ್ಕೀಡಾಗಿವೆ. ಬೆಲೆ ಏರಿಕೆಯ ಪ್ರಸ್ತಾವನೆಯನ್ನಷ್ಟೇ ಮಾಡುವ ಇಂತಹ ಎಸ್ಕಾಂಗಳಿಗೆ ಬೀಗ ಹಾಕಬೇಕಿದೆ ಎಂದು ಒತ್ತಾಯಿಸಿದರು.
ಸೂಡಾ ಮಾಜಿ ಅಧ್ಯಕ್ಷ ಎಸ್.ದತ್ತಾತ್ರಿ ಮಾತನಾಡಿ, ಗ್ಯಾರಂಟಿ ಘೋಷಿಸಿ ಜನರಿಗೆ ಮಂಕುಬೂದಿ ಎರಚಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ. ಈಗ ಹಣಕಾಸು ಹೊಂದಿಸಲು ಸಾಧ್ಯವಾಗದೆ ದಿನಕ್ಕೊಂದು ಷರತ್ತು ವಿಧಿಸುತ್ತಿದೆ. ವಿದ್ಯುತ್ ದರ ಹೆಚ್ಚಳ ಮಾಡಿ ಜನರ ಮೇಲೆ ಹೊರೆ ಹಾಕಲಾಗುತ್ತಿದೆ. ಪ್ರತಿ ಯೂನಿಟ್‌ಗೆ ಈ ಹಿಂದೆ 30ರಿಂದ 40 ಪೈಸೆ ಹೆಚ್ಚಳ ಮಾಡುತ್ತಿದ್ದರು. ಈಗ 7 ರೂ. ಹೆಚ್ಚಳ ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿ ನಗರ ಅಧ್ಯಕ್ಷ ಎನ್.ಕೆ.ಜಗದೀಶ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರ ಜನರಿಗೆ ಹೊರೆ ಮಾಡಬಾರದು ಎಂದು ಏರಿಕೆ ಪ್ರಸ್ತಾವವನ್ನು ತಡೆ ಹಿಡಿದಿತ್ತು. ಒಂದು ವೇಳೆ ಬಿಜೆಪಿ ಸರ್ಕಾರವೇ ದರ ಏರಿಕೆ ಮಾಡಿದ್ದರೆ ಅದನ್ನು ಹಿಂಪಡೆಯಲು ಆಗುವುದಿಲ್ಲವೆ. ಬಿಜೆಪಿ ಸರ್ಕಾರದ ಕಾನೂನು ಹಿಂಪಡೆಯುತ್ತೀವಿ ಅನ್ನುವವರು ಇದನ್ನೇಕೆ ಹಿಂಪಡೆಯಲ್ಲ. ಯಾವುದೇ ಕಾರಣಕ್ಕೂ ಜನರಿಗೆ ವಿದ್ಯುತ್ ಹೊರೆ ಹಾಕಬಾರದು ಎಂದು ಮನವಿ ಮಾಡಿದರು. ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಇ.ವಿಶ್ವಾಸ್, ಸಂತೋಷ್ ಬಳ್ಳೆಕೆರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net