

ಬೆಂಗಳೂರು ಬೆಂಗಳೂರಿನ ಯಾವುದಾದರೂ ಒಂದು ಸ್ಥಳದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆ ಮಾಡಲಾಗುವುದು ಮತ್ತು ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಾರಸು ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಭರವಸೆ ನೀಡಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರು ವಿಶ್ವವಿದ್ಯಾಲಯವು ಸಮುದಾಯಕ್ಕೆ ಸಂಬಂಧಿಸಿದ ವರದಿ ನೀಡಬೇಕು. ನಂತರ ಅದನ್ನು ಸ್ವೀಕರಿಸಿ ಕೇಂದ್ರಕ್ಕೆ ಶಿಾರಸು ಮಾಡಲಾಗುವುದು. ಈ ವಿಚಾರದಲ್ಲಿ ರಾಜ್ಯ ಸರ್ಕಾರವು ಬಹಳ ಸ್ಪಷ್ಟವಾಗಿದೆ ಎಂದು ಪುನರುಚ್ಚಿಸಿದರು.
ಗಂಗಾಮತಸ್ಥರಿಗೆ ಮಾಗಡಿ ರಸ್ತೆಯಲ್ಲಿ ಈಗಾಗಲೇ ಒಂದು ಎಕರೆ ಜಮೀನು ನೀಡಲಾಗಿದೆ. ಅದು ಅರಣ್ಯ ಭೂಮಿ ಎಂಬ ಕಾರಣಕ್ಕೆ ವ್ಯಾಜ್ಯ ನಡೆಯುತ್ತಿದೆ. ಸರ್ಕಾರದ ಕಡೆಗೆ ನ್ಯಾಯ ಬರಲಿದೆ ಎಂಬ ವಿಶ್ವಾಸವಿದೆ. ಜಾಗ ನಿಮಗೆ ದೊರೆತ ತಕ್ಷಣ ಸಮುದಾಯ ಭವನ ನಿರ್ಮಾಣಕ್ಕೆ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.
ಜಯಂತಿಗೆ ರಜೆ ಬೇಡ:
ಜಯಂತಿಗೆ ರಜೆ ನೀಡಬೇಕೆಂಬ ಬೇಡಿಕೆಗೆ ಸ್ಪಂದಿಸಿದ ಸಚಿವರು, ಈಗಾಗಲೇ ಸರ್ಕಾರದಿಂದ 33 ಜಯಂತಿಗಳನ್ನು ಆಚರಣೆ ಮಾಡಲಾಗುತ್ತಿದೆ. ಸರ್ಕಾರಕ್ಕೂ ರಜೆ ಜಾಸ್ತಿಯಾಗಿವೆ. ವಚನಕಾರರು ಕಾಯಕವೇ ಕೈಲಾಸವೆಂದು ಹೇಳಿದ್ದರು. ನಾವು ಕೂಡ ಕಾಯಕ ಮಾಡುತ್ತಲೇ ಶರಣರನ್ನು ಸ್ಮರಿಸೋಣವೆಂದು ಹೇಳಿದರು.
ಅಂಬಿಗರ ಚೌಡಯ್ಯ ನೇರ, ನಿಷ್ಠುರ ನುಡಿಗೆ ಹೆಸರಾಗಿದ್ದರು. ಯಾವುದನ್ನೇ ಆದರೂ ನೇರವಾಗಿ ನುಡಿಯುತ್ತಿದ್ದರು. ಈ ಸಮುದಾಯ ಕೂಡ ಅದೇ ರೀತಿ ನೇರ ನಡೆ-ನುಡಿ ಪ್ರದರ್ಶಿಸುತ್ತಿದೆ. ಸಮುದಾಯವನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಲಾಖೆ ಕಾರ್ಯದರ್ಶಿ ಡಾ. ಎನ್. ಮಂಜುಳಾ, ನಿರ್ದೇಶಕಿ ಡಾ. ಧರಣೀದೇವಿ ಮಾಲಗತ್ತಿ, ಸಂಘದ ಉಪಾಧ್ಯಕ್ಷ ಮಣ್ಣೂರು ನಾಗರಾಜ ಸೇರಿ ಹಲವರು ಉಪಸ್ಥಿತರಿದ್ದರು.