

ಬೆಂಗಳೂರು: ಬಾಡಿಗೆ ಕಟ್ಟಡದಲ್ಲಿರುವ ಮುಜರಾಯಿ ಇಲಾಖೆಗೆ ಸ್ವಂತ ಸೂರು ಕಲ್ಪಿಸುವ ಪ್ರಯತ್ನ ಆರಂಭವಾಗಿದ್ದು, ಇಷ್ಟರಲ್ಲೇ ಕಟ್ಟಡ ನಿರ್ಮಾಣ ಆರಂಭವಾಗಲಿದೆ.
ಪ್ರಸ್ತುತ ಧಾರ್ಮಿಕ ದತ್ತಿ ಇಲಾಖೆ ಕಚೇರಿಯು ಮಿಂಟೋ ಆಸ್ಪತ್ರೆ ಬಳಿ ಇದ್ದು, ಪ್ರತಿ ತಿಂಗಳು ಸುಮಾರು 11 ಲಕ್ಷ ಬಾಡಿಗೆ ನೀಡಲಾಗುತ್ತಿದೆ. ಸ್ವಾತಂತ್ರ್ಯ ನಂತರ ಇಲಾಖೆ ಪ್ರಾರಂಭವಾದರು ಇಲ್ಲಿಯವರೆಗೂ ಸ್ವಂತ ಕಟ್ಟಡ ಹೊಂದಿಲ್ಲ. ರಾಜ್ಯದಲ್ಲಿ ಹಾಗೂ ಬೆಂಗಳೂರಿನಲ್ಲಿ ನೂರಾರು ಎಕರೆಗಳು ದೇವಸ್ಥಾನದ ಮುಜರಾಯಿ ಇಲಾಖೆಯ ಆಸ್ತಿಗಳಿದ್ದರೂ ಮುಜರಾಯಿ ಇಲಾಖೆಗೆ ಸ್ವಂತ ಕಟ್ಟಡ ಸಾಧ್ಯವಾಗಿರಲಿಲ್ಲ. ಇದೀಗ ಕಾಲ ಕೂಡಿಬಂದಿದ್ದು, ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಪ್ರಯತ್ನ ನಡೆಸಿದ್ದಾರೆ.
ವಿಧಾನಸೌಧ ಪಕ್ಕದಲ್ಲಿರುವ ಬಹುಮಹಡಿ ಕಟ್ಟಡ (ಎಂ.ಎಸ್.ಬಿಲ್ಡಿಂಗ್) ಎದುರು ರಾಮಾಂಜನೇಯ ದೇವಸ್ಥಾನವಿದ್ದು, ದೇವಸ್ಥಾನ ಹಿಂಬಾಗ ಇರುವ ಮುಜರಾಯಿ ಇಲಾಖೆಯ 20 ಗುಂಟೆ ಜಾಗದಲ್ಲಿ ಜಾಗದಲ್ಲಿ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ.
ಇಲಾಖೆ ಕಟ್ಟಡ ವಿಶೇಷ ರೀತಿಯಲ್ಲಿರಬೇಕೆಂದು ಹೊಯ್ಸಳ ಶೈಲಿಯಲ್ಲಿ ನಿರ್ಮಿಸಲಾಗುತ್ತಿದ್ದು, ಧಾರ್ಮಿಕ ಸೌಧ ಎಂದೂ ನಾಮಕರಣ ಮಾಡಲಾಗುತ್ತಿದೆ.
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ನೆಲಮಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ, ಮೊದಲ ಮಹಡಿಯಲ್ಲಿ ಕೋರ್ಟ್ ಹಾಲ್, ಆಯುಕ್ತರ ಕಚೇರಿ, ಸರ್ವೆ ಇಲಾಖೆ, ಕೇಂದ್ರ ಕಚೇರಿ ಒಂದು ಭಾಗವಿದ್ದರೆ, ಎರಡನೇ ಮಹಡಿಯಲ್ಲಿ ಆಗಮ ಸೆಕ್ಷನ್ ಆಫೀಸರ್, ಐಟಿ ಸೆಕ್ಷನ್, ಇಂಜಿನಿಯರಿಂಗ್ ಸೆಕ್ಷನ್, ಮೀಟಿಂಗ್ ಹಾಲ್ ಇರಲಿದೆ. ಮೂರನೇ ಮಹಡಿಯಲ್ಲಿ ಓಪನ್ ಆಫೀಸ್ ಹಾಲ್, ಅಧೀಕ್ಷಕರ ಕಚೇರಿಗಳು, ಡಿಜಿಟಲ್ ಲೈಬ್ರರಿ, ಆರ್‌ಡಿಪಿಆರ್, ದಾಖಲೆಸಂಗ್ರಹಗಾರಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ನಾಲ್ಕನೇ ಮಹಡಿಯಲ್ಲಿ ಸಭಾಂಗಣ ನಿರ್ಮಿಸಲಾಗುತ್ತದೆ.
ಹಾಗೆಯೇ, ಈಗಿರುವ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಬ್ಬರು ಅರ್ಚಕರಿಗೆ ಎರಡು ಕೊಠಡಿ ವಸತಿ ಮನೆ ನಿರ್ಮಿಸಿಕೊಡಲಾಗುತ್ತದೆ. ಹಾಗೆಯೇ, ಆ ದೇವಸ್ಥಾನದ ಹಾಗೂ ಹೋಗು ಖರ್ಚುಗಳನ್ನು ಮುಜರಾಯಿ ಇಲಾಖೆ ಭರಿಸಲಿದ್ದು, ದೇವಸ್ಥಾನ ಮುಂದೆ ಇರುವ ಯಾಗ ಶಾಲೆ, ಪಾಕಶಾಲೆ, ನವೀಕರಣ ಮಾಡಲಾಗುವುದು.
ಮುಜರಾಯಿ ಮತ್ತು ಸಾರಿಗೆ ಇಲಾಖೆ ಸಚಿವರಾದ ರಾಮಲಿಂಗ ರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ದತ್ತಿ ಇಲಾಖೆ ಪರಿಷತ್ ಸಭೆಯಲ್ಲಿ ಕಟ್ಟಡ ನಿರ್ಮಾಣ ಮಾಡಲು ನಿರ್ಧರಿಸಿದ್ದು, ನೀಲಿ ನಕ್ಷೆ ಸಿದ್ಧವಾಗಿದೆ.ಅತಿ ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
ಬೆಂಗಳೂರಲ್ಲಿ ಮುಜರಾಯಿ ಇಲಾಖೆಗೆ ಸೇರಿದ ನೂರಾರು ಎಕರೆ ಜಾಗವಿದ್ದರೂ ಇಲಾಖೆಗೆ ಸ್ವಂತ ಕಟ್ಟಡ ಇರಲಿಲ್ಲ. ಈಗ ಕಾಲ ಕೂಡಿಬಂದಿದೆ. ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಿಸಿಕೊಡಲಿದೆ. - ರಾಮಲಿಂಗಾ ರೆಡ್ಡಿ, ಮುಜರಾಯಿ ಸಚಿವರು