ಅಲೆಮಾರಿ ಸಮುದಾಯಕ್ಕೆ 69 ಸಾವಿರ ಮನೆ ನಿರ್ಮಾಣ

Somanna
Published on

ಬೆಂಗಳೂರು: ರಾಜ್ಯದಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಕ್ಕೆ ದೇವರಾಜ ಅರಸು ವಸತಿ ನಿಗಮದಿಂದ 69 ಸಾವಿರ ಮನೆ ನಿರ್ವಿುಸಿ ಕೊಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

ಅಧಿಕಾರಿಗಳ ಸಭೆ ಬಳಿಕ ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಲೆಮಾರಿಗಳು ಹೆಚ್ಚಾಗಿರುವ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಅಧಿಕಾರಿಗಳ ಸಭೆ ಈಗ ನಡೆಸಲಾಗಿದ್ದು, ಅರ್ಹ ಫಲಾನುಭವಿಗಳ ಪಟ್ಟಿ ತರುವಂತೆ ಸೂಚಿಸಲಾಗಿದೆ ಎಂದರು. ಸಭೆಗೆ 20 ಸಾವಿರ ಫಲಾನುಭವಿಗಳ ಪಟ್ಟಿಯನ್ನು ಮಾತ್ರ ಅಧಿಕಾರಿಗಳು ತಂದಿದ್ದರು. ರಾಜ್ಯದ ಎಲ್ಲ ಕಡೆಯಲ್ಲೂ ಅಲೆಮಾರಿಗಳ ಪಟ್ಟಿ ಮಾಡುವಂತೆ ಸೂಚಿಸಲಾಗಿದೆ. ಪ್ರತಿ ಮನೆಗೆ 1.2 ಲಕ್ಷ ರೂ. ಅನುದಾನ ಒದಗಿಸಲಿದ್ದು, 4 ಕಂತಿನಲ್ಲಿ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಲಾಗುವುದು. ಇದರ ನೆರವಿನಿಂದ ಅವರು ಮನೆ ಕಟ್ಟಿಕೊಳ್ಳಲಿದ್ದಾರೆ. 20-25 ದಿನಗಳಲ್ಲಿ ಫಲಾನುಭವಿಗಳಿಗೆ ಆದೇಶಪತ್ರ ಕೊಡಲಾಗುವುದು. ರಾಮಮಂದಿರ ಶಂಕುಸ್ಥಾಪನೆ ದಿನ ಈ ಮಹತ್ವದ ಕಾರ್ಯದ ನಿರ್ಣಯ ಮಾಡಿದ್ದೇವೆ. ವಸತಿ ಇಲಾಖೆ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರಲಾಗುವುದು ಎಂದರು.

ಸಿಎಂ ಬಿಎಸ್​ವೈ ಸಹಕಾರ

ನನ್ನ ಇಲಾಖೆಯ ಎಲ್ಲ ಕೆಲಸಕ್ಕೂ ಸಿಎಂ ಬಿ.ಎಸ್.ಯಡಿಯೂರಪ್ಪ ಸಹಕಾರ ಕೊಡುತ್ತಿದ್ದಾರೆ ಎಂದು ಸೋಮಣ್ಣ ಹೇಳಿದರು. ಆಸ್ಪತ್ರೆಯಲ್ಲಿರುವ ಸಿಎಂ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ. ಆದಷ್ಟು ಬೇತರಿಸಿಕೊಂಡು, ಮತ್ತೆ ಜನಪರ ಕೆಲಸಕ್ಕೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೂ ಬೇಗ ಚೇತರಿಸಿಕೊಳ್ಳಲಿ ಎಂದು ಸಚಿವರು ಹಾರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net