ಹಸನಾಗದ ಆದಿವಾಸಿಗಳ ಬದುಕು

 ಹುಣಸೂರು ತಾಲೂಕು ತರೀಕಲ್ ರಂಗಯ್ಯಕೊಪ್ಪಲು ಹಾಡಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿವಾಸಿ ಮುಖಂಡ ಜಯಪ್ಪ ಸಂವಿಧಾನ ಪೀಠಿಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹರಿಹರ ಆನಂದಸ್ವಾಮಿ, ಪಿ.ಕೆ.ರಾಮು, ಗಿರಿಜ, ವಿಠಲ್ ಇತರರಿದ್ದರು.
ಹುಣಸೂರು ತಾಲೂಕು ತರೀಕಲ್ ರಂಗಯ್ಯಕೊಪ್ಪಲು ಹಾಡಿಯಲ್ಲಿ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಆದಿವಾಸಿ ಮುಖಂಡ ಜಯಪ್ಪ ಸಂವಿಧಾನ ಪೀಠಿಕೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹರಿಹರ ಆನಂದಸ್ವಾಮಿ, ಪಿ.ಕೆ.ರಾಮು, ಗಿರಿಜ, ವಿಠಲ್ ಇತರರಿದ್ದರು.
Published on

ಮೈಸೂರು: ಹುಣಸೂರು ತಾಲೂಕಿನ ತರೀಕಲ್ ರಂಗಯ್ಯನಕೊಪ್ಪಲು ಹಾಡಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಸಂವಿಧಾನಪೀಠಿಕೆಯನ್ನು ಗಿರಿಜನ ವಿದ್ಯಾರ್ಥಿಗಳು ವಾಚಿಸಿದರು.

ಆದಿವಾಸಿ ಬುಡಕಟ್ಟು ಕೃಷಿಕರ ಸಂಘ, ಡೀಡ್ ಸಂಸ್ಥೆ, ಆದಿವಾಸಿ ಮಹಿಳಾ ಸಂಘ ಮತ್ತು ದಲಿತ ಚಳುವಳಿ ನವನಿರ್ಮಾಣ ವೇದಿಕೆ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿ ಧನುಷ್ ಸಂವಿಧಾನ ಪೀಠಿಕೆಯನ್ನು ಓದಿದರು. ಗಿರಿಜನ ಮುಖಂಡ ಜಯಪ್ಪ, ಸಂವಿಧಾನ ಪೀಠಿಕೆಯ ಅರ್ಥ ಮತ್ತು ಅದರ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಈ ವೇಳೆ ಮಾತನಾಡಿದ ಡೀಡ್ ಸಂಸ್ಥೆ ನಿರ್ದೇಶಕ ಡಾ.ಎಸ್.ಶ್ರೀಕಾಂತ್, ಆದಿವಾಸಿಗಳ ಬದುಕು ಇಂದಿಗೂ ಹಸನಾಗದೆ ಉಳಿದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದರೂ ತವರು ಜಿಲ್ಲೆಯ ಆದಿವಾಸಿಗಳ ಸಮಸ್ಯೆಯನ್ನು ಪರಿಹರಿಸಲು ಮುಂದೆ ಬಂದಿಲ್ಲ. ಕರ್ನಾಟಕ ಹೈಕೋರ್ಟ್ ನೀಡಿರುವ ಆದಿವಾಸಿ ಪರ ತೀರ್ಪನ್ನು ಅನುಷ್ಠಾನಗೊಳಿಸಿ ಕಾಡಿನಿಂದ ಹೊರಹಾಕಿದ ಆದಿವಾಸಿ ಕುಟುಂಬಗಳಿಗೆ ನ್ಯಾಯ ನೀಡದೆ ಹತ್ತು ವರ್ಷ ಕಾಹರಣ ಮಾಡಿರುವುದು ಸರ್ಕಾರಗಳಿಗೆ ಇರುವ ಸಂವಿಧಾನ ಬದ್ಧತೆಯ ಬಗ್ಗೆ ಅನುಮಾನಗಳನ್ನು ಹುಟ್ಟಿಸುತ್ತದೆ ಎಂದು ಅಸಮಾಧಾನ ತೋಡಿಕೊಂಡರು.
ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತನಾಡಿ, ಕರ್ನಾಟಕ ಸರ್ಕಾರ ಸೆಪ್ಟೆಂಬರ್ 15 ರಂದು ಸಂವಿಧಾನ ಪೀಠಿಕೆಯನ್ನು ಸುಮಾರು 2 ಕೋಟಿಗೂ ಹೆಚ್ಚಿನ ಜನರು ಓದಿರುವುದು ದಾಖಲಾರ್ಹವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಬೆಟ್ಟ ಕುರುಬ ಪಾರಂಪರಿಕ ಸಂಘದ ವಿಠಲ್ ಅವರು, ಬುಡಕಟ್ಟು ಕೃಷಿಕರ ಸಂಘವು ಸರ್ಕಾರಕ್ಕೆ ಆದಿವಾಸಿಗಳ ಪರವಾಗಿ ಸಲ್ಲಿಸಿರುವ ಹಕ್ಕೊತ್ತಾಯದ ಮನವಿಯನ್ನು ಮಂಡಿಸಿ, ತರಿಕಲ್ ರಂಗಯ್ಯನಕೊಪ್ಪಲು ಸಮೀಪದ ಅರಣ್ಯ ಭೂಮಿಯನ್ನು ಹಳ್ಳದ ಕೊಪ್ಪಲು ಮತ್ತು ರಂಗಯ್ಯನ ಕೊಪ್ಪಲ ಆದಿವಾಸಿಗಳಿಗೆ ಅರಣ್ಯ ಹಕ್ಕಿನ ಕಾಯ್ದೆಯ ಅನ್ವಯ ಸಲ್ಲಿಸಿರುವ ಪ್ರಸ್ತಾವಗಳನ್ನು ಪರಿಗಣಿಸಿ ಕೂಡಲೇ ಹಕ್ಕು ಪತ್ರ ನೀಡಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ದಲಿತ ಚಳವಳಿ ನವನಿರ್ಮಾಣ ವೇದಿಕೆ ಮುಖ್ಯಸ್ಥ ಹರಿಹರ ಆನಂದಸ್ವಾಮಿ, ದರ್ಶನ್, ಡೀಡ್ ಸಂಯೋಜಕ ಎ.ಪ್ರಕಾಶ್, ಆದಿವಾಸಿ ಮಹಿಳಾ ಸಂಘದ ಅಧ್ಯಕ್ಷೆ ಗಿರಿಜಾ, ಶಾಲೆಯ 7 ಮತ್ತು 8ನೇ ತರಗತಿ ಆದಿವಾಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net