

ಶಿವಮೊಗ್ಗ: ಇಡೀ ರಾಷ್ಟ್ರಕ್ಕೆ ಶಕ್ತಿ ತುಂಬಲು ಹಾಗೂ ಪ್ರಜಾಪ್ರಭುತ್ವದ ಶಕ್ತಿಯನ್ನು ಮತ್ತಷ್ಟು ಬಲಗೊಳಿಸಲು ಇರುವ ಸಾಧನವೇ ಸಂವಿಧಾನ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸಂವಿಧಾನದ ಪೀಠಿಕೆ ಓದುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವದಲ್ಲೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ, ವಿಶ್ವಗುರುವಾಗಿ ಗುರುತಿಸಿಕೊಂಡಿದೆ. ಜತೆಗೆ ರಾಷ್ಟ್ರದ ನಾಯಕರ ಹಿತಚಿಂತನೆಗಳಿಂದ ವಿಶ್ವದ ಗಮನ ಸೆಳೆದು ಜನಮನ್ನಣೆ ಪಡೆದಿರುವುದು ಎಲ್ಲರೂ ಸಂಭ್ರಮಿಸಬೇಕಾದ ಸಂಗತಿಯಾಗಿದೆ ಎಂದರು.
ಭಾರತ ಭಾರತವಾಗಿಯೇ ಉಳಿಸಿಕೊಳ್ಳಲು ಲಕ್ಷಾಂತರ ಜನರು ತಮ್ಮ ಪ್ರಾಣ ಮುಡಿಪಾಗಿಟ್ಟಿದ್ದನ್ನು, ಅದರ ಶ್ರೇಯಸ್ಸಿಗೆ ಶ್ರಮಿಸಿದ್ದುದನ್ನು ಅತ್ಯಂತ ಗೌರವದಿಂದ ಸ್ಮರಿಸಬೇಕು. ದೇಶದಲ್ಲಿ ಸಾಮಾನ್ಯನಿಂದ ಅತ್ಯುಚ್ಚ ಸ್ಥಾನ ಪಡೆದಿರುವ ವ್ಯಕ್ತಿಯೂ ಎಲ್ಲರಂತೆ ಸಮಾನವಾದ ಜೀವನವನ್ನು ನಡೆಸಲು ಎಲ್ಲ ರೀತಿಯ ಹಕ್ಕುಗಳನ್ನು ನೀಡಲಾಗಿದೆ. ಅನೇಕರು ಸಾಮಾನ್ಯ ವ್ಯಕ್ತಿಗಳು ಕೂಡ ದೇಶಕ್ಕೆ ಶ್ರೇಷ್ಟವಾದ ಪರಂಪರೆ ಮತ್ತು ಚಿಂತನೆ ನೀಡಿದ್ದಾರೆ ಎಂದು ಹೇಳಿದರು.
ದೇಶದಲ್ಲಿ ತುಳಿತಕ್ಕೊಳಗಾದ ಸಮುದಾಯವರನ್ನು ಮೇಲೆತ್ತಲು ಸಿಡಿದೆದ್ದ ಡಾ. ಬಿ.ಆರ್.ಅಂಬೇಡ್ಕರ್ ಅವರು ಮುಂದಿನ ದಿನಗಳಲ್ಲಿ ದೇಶ ಇರಬೇಕಾದ ರೀತಿಯ ಬಗ್ಗೆ ಸಕಾಲಿಕ ಮಾರ್ಗದರ್ಶನ ಮಾಡಿದ್ದಾರೆ. ಅದಕ್ಕಾಗಿ ಅಂಬೇಡ್ಕರ್ ಅವರ ಕೊಡುಗೆಯನ್ನು ಎಲ್ಲರೂ ಮೆಚ್ಚಲೇಬೇಕು ಎಂದರು.