

ಬೆಂಗಳೂರು: ಧರ್ಮಸ್ಥಳ ಶ್ರೀಮಂಜುನಾಥೇಶ್ವರ ದೇವಸ್ಥಾನದ ವಿರುದ್ಧ ವ್ಯವಸ್ಥಿತ ಅಪಪ್ರಚಾರ, ಹಿಂದು ಧಾರ್ಮಿಕ ನಂಬಿಕೆ ಹಾಳುಗೆಡುವಲು ಸಂಚು ರೂಪಿಸಿದವರನ್ನು ಬಯಲಿಗೆಳೆಯಲು ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಡಿಸಿಎಂ ನಿಜಕ್ಕೂ ಮಂಜುನಾಥೇಶ್ವರನನ್ನು ನಂಬಿದ್ದರೆ, ಶ್ರೀಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಹಿನ್ನೆಲೆಯಲ್ಲಿರುವ ವ್ಯಕ್ತಿಗಳ ತನಿಖೆ ಮಾಡಿ ಬಯಲಿಗೆಳೆಯಬೇಕು ಎಂದರು.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿಷಯದಲ್ಲಿ ಜನರ ತಾಳ್ಮೆ, ಸಹನೆಯನ್ನು ಸರ್ಕಾರ ಪರೀಕ್ಷಿಸಬಾರದು. ಸತ್ಯಶೋಧ, ನ್ಯಾಯ ಕೊಡಿಸಲು ಉದ್ದೇಶಿತ ಎಸ್‌ಐಟಿ ತನಿಖೆಯನ್ನು ಎಲ್ಲರೂ ಸ್ವಾಗತಿಸಿದ್ದು, ದೂರು ನೀಡಿದ ಅನಾಮಿಕ ವ್ಯಕ್ತಿ ಬಗ್ಗೆ ತನಿಖೆಯಾಗಬೇಕು ಎಂದು ಕೋರಿದರು.
ಸಾಮಾಜಿಕ ಜಾಲತಾಣದಲ್ಲಿ ಧರ್ಮಸ್ಥಳದ ಬಗ್ಗೆ ಬಾಯಿಗೆ ಬಂದಂತೆ ಮಾತುಗಳು, ಇವರೇ ತನಿಖೆ ಇವರೇ ತೀರ್ಪು ಕೊಡುತ್ತಿದ್ದು, ಧರ್ಮಾಧಿಕಾರಿಗಳು ಮೇಲೂ ಆಪಾದಿಸುತ್ತಿದ್ದರೆ. ಇದರಿಂದ ಹಿಂದು ಸಮಾಜ, ಶ್ರೀ ಮಂಜುನಾಥೇಶ್ವರನನ್ನು ನಂಬುವ ಭಕ್ತರಿಗೆ ಬಹಳಷ್ಟು ನೋವಾಗಿದೆ ಎಂದು ಹೇಳಿದರು.
ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ, ದ್ವೇಷ ಹರಡುವ, ಪ್ರಚೋದನೆಕಾರಿ ಸಂದೇಶ ಹಂಚಿಕೊಳ್ಳುವವರ ವಿರುದ್ಧ ಗೃಹ ಇಲಾಖೆ ಸ್ವಯಂಪ್ರೇರಿತ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆಯನ್ನು ಆಕ್ರೋಶಭರಿತರ ಕೃತ್ಯವೆಂದು ಸಮರ್ಥಿಸಿಕೊಂಡರೆ, ಇದು ಹಿಂದು ಸಮುದಾಯಗಳ ಮುಖಂಡರು, ಕಾರ್ಯಕರ್ತರಿಗೆ ಅನ್ವಯಿಸುವುದಿಲ್ಲ ಎಂಬಂತೆ ಹಲವು ಕಡೆ ದಾವೆ ಹೂಡಲಾಗಿದೆ.
ಆದರೆ ಧರ್ಮಸ್ಥಳ, ಧರ್ಮಾಧಿಕಾರಿಗಳ ವಿಷಯದಲ್ಲಿ ಅವಹೇಳನ, ನಿಂದನೆ ಸಂದೇಶಗಳನ್ನು ಹಂಚಿಕೊಳ್ಳಲಾಗುತ್ತಿದೆ. ಆದರೂ ಗೃಹ ಇಲಾಖೆ ಕಾನೂನು ಕ್ರಮ, ಸ್ವಯಂಪ್ರೇರಿತ ಮೊಕದ್ದಮೆ ದಾಖಲಿಸುತ್ತಿಲ್ಲವೇಕೆ ? ಎಂದು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರಶ್ನಿಸಿದರು.