ನಮ್ಮನ್ನೂ ಪರಿಗಣಿಸಿ! ಪರಾಜಿತ ಕೈ ಅಭ್ಯರ್ಥಿಗಳ ಸಭೆ

CONGRESS
Published on

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡ ಅಭ್ಯರ್ಥಿಗಳು ಶುಕ್ರವಾರ ಸಭೆ ನಡೆಸಿ, ಸರ್ಕಾರವನ್ನು ಬಳಸಿಕೊಂಡು ಜನರ ನಡುವೆ ಸಕ್ರಿಯರಾಗಿರುವ ಕುರಿತು ತೀರ್ಮಾನ ಕೈಗೊಂಡರು.

ವಿಧಾನಸಭೆಯಲ್ಲಿ ಸೋತ ಅಭ್ಯರ್ಥಿಗಳ ಮನವಿಗೆ ಸರ್ಕಾರ ಸ್ಪಂದಿಸುವಂತೆ ಲೋಕಸಭೆ ಚುನಾವಣೆಯಲ್ಲಿ ಸೋತವರನ್ನು ಪರಿಗಣಿಸಬೇಕು, ಸೋತ ಅಭ್ಯರ್ಥಿಗಳು ತರುವ ವರ್ಗಾವಣೆ, ಅನುದಾನ, ಕಾಮಗಾರಿಗಳ ಪ್ರಸ್ತಾವನೆ ಮಂಜೂರಾತಿಗೂ ಸಹಕಾರ ಕೊಡಬೇಕು ಎಂದು ಸರ್ಕಾರದ ಮುಂದೆ ಬೇಡಿಕೆ ಮುಂದಿಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದರು.

ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು ತಮ್ಮ ಲೇಟರ್ ಹೆಡ್‌ನಲ್ಲಿ ಮನವಿ ಕೊಟ್ಟರೂ ಸರ್ಕಾರ ಸ್ಪಂದಿಸುತ್ತದೆ, ಅವರ ಕ್ಷೇತ್ರದ ಯಾವುದೇ ಕೆಲಸ ಇದ್ದರೂ ಸ್ಪಂದಿಸುತ್ತದೆ. ಆದರೆ ಲೋಕಸಭಾ ಪರಾಜಿತ ಅಭ್ಯರ್ಥಿಗಳ ಕೆಲಸ ಆಗುತ್ತಿಲ್ಲ. ನಾವು ಮನವಿ ಕೊಟ್ಟರು ನಮ್ಮ ಕ್ಷೇತ್ರಗಳ ಕೆಲಸ ಮಾಡುತ್ತಿಲ್ಲ. ಈ ತಾರತಮ್ಯ ಹೋಗಿಸಬೇಕು ಎಂಬ ಅಸಹನೆ ವ್ಯಕ್ತವಾಯಿತಲ್ಲದೇ, ಮುಂದಿನ ಚುನಾವಣೆ ಗೆಲ್ಲಲು ನಮಗೆ ಅನೂಕೂಲಕರ ವಾತಾವರಣ ನಿರ್ಮಿಸಬೇಕೆಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲು ನಿರ್ಧರಿಸಲಾಯಿತು.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಾದ ಲಕ್ಷ್ಮಣ್, ಮೃಣಾಲ್ ಹೆಬ್ಬಾಳ್ಕರ್, ಸಂಯುಕ್ತಾ ಪಾಟೀಲ್, ಸ್ಟಾರ್ ಚಂದ್ರು, ಮನ್ಸೂರ್ ಆಲಿಖಾನ್, ಜಯಪ್ರಕಾಶ್ ಹೆಗ್ಡೆ, ರಾಜು ಅಲಗೂರು, ಗೌತಮ್ ಸೇರಿದಂತೆ ಹಲವರು ಇದ್ದರು. ಡಿ.ಕೆ.ಸುರೇಶ್ ನೇತೃತ್ವ ವಹಿಸಿದ್ದರು.

ಕಾಂಗ್ರೆಸ್ ವಕ್ತಾರ, ಮೈಸೂರು ಲೋಕಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಂ.ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ, ಪಕ್ಷದಲ್ಲಿ ನಮ್ಮನ್ನ ಪರಿಗಣಿಸುವ ಕೆಲಸ ಆಗುತ್ತಿಲ್ಲ. ನಮ್ಮನ್ನ ಪಕ್ಷ ಸಂಘಟನೆಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ನಾವು ಯಾವುದೇ ಹುದ್ದೆಯನ್ನು ಕೇಳುತ್ತಿಲ್ಲ. ನಿಗಮ, ಮಂಡಳಿ ಸೇರಿದಂತೆ ಯಾವುದೇ ಸ್ಥಾನಮಾನ ಕೇಳುತ್ತಿಲ್ಲ. ಪಕ್ಷದ ವಿಚಾರದಲ್ಲಿ ಆದ್ಯತೆ ನೀಡುವಂತೆ ಕೇಳುತ್ತಿದ್ದೇವೆ. ಸಭೆಯ ವಿಚಾರವನ್ನು ಸಿಎಂ, ಡಿಸಿಎಂ ಗಮನಕ್ಕೂ ತರುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net