

ಶಿವಮೊಗ್ಗ: ಜಲ ಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರನ್ನು ಸ್ಥಳೀಯ ಸಂಸ್ಥೆಗಳ ವಿವಿಧ ವೃಂದಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕಾಯಂ ನೌಕರರನ್ನಾಗಿ ಪರಿಗಣಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಒತ್ತಾಯಿಸಿದರು.
ಮಂಗಳವಾರ ಪರಿಷತ್‌ನ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರು ಸರಬರಾಜು ಮಾಡುವವರು ದಿನವೂ ಮೂರು ಪಾಳಿಗಳಲ್ಲಿ ದುಡಿಯುತ್ತಿದ್ದಾರೆ. ಕರೊನಾ ಸಂದರ್ಭದಲ್ಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಮೂವರು ಶಿವಮೊಗ್ಗ ಪಾಲಿಕೆ ವ್ಯಾಪ್ತಿಯಲ್ಲಿ ಕರೊನಾ ಸಂದರ್ಭದಲ್ಲಿ ಮೃತಪಟ್ಟಿದ್ದರು ಎಂದು ಹೇಳಿದರು.
ಮೂಲ ಸೌಲಭ್ಯ ಒದಗಿಸುವವರಿಗೆ ಕನಿಷ್ಠ ನೇರ ಪಾವತಿಯ ಖಾತ್ರಿ ನೀಡಬೇಕೆಂದು ನ್ಯಾಯಾಲಯವೇ ಸೂಚಿಸಿದೆ. ಹೀಗಾಗಿ ಇವರ ಸೇವೆಗೆ ಮನ್ನಣೆ ನೀಡಬೇಕು. ಇವರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಸ್ಪಂದಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್, ನಗರ ಪಾಲಿಕೆಗಳ ಹೊರಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಪ್ರಸ್ತುತ ನಿಯಮಗಳಲ್ಲಿ ಅವಕಾಶವಿಲ್ಲ. ಆದರೂ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಜಲಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ನೌಕರರಿಗೆ ಸಾಧ್ಯವಾದಷ್ಟು ಅನುಕೂಲ ಕಲ್ಪಿಸಲಾಗುವುದು ಎಂದರು.