

ಬೆಂಗಳೂರು: ನಿಷೇಧದ ಹೊರತಾಗಿಯೂ ಉದ್ಯೋಗನಿಮಿತ್ತ ಯೆಮನ್ ದೇಶಕ್ಕೆ ಪ್ರಯಾಣ ಬೆಳೆಸಿದ್ದ ಶುಶ್ರೂಷಕಿಯ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಪ್ರಕರಣ ಸಂಬಂಧ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪಾಸ್‌ಪೋರ್ಟ್ ಹಿಂದಿರುಗಿಸಬೇಕೆಂಬ ಮಹಿಳೆಯ ಮನವಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಶಾನಿ ಜೋಸ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರು ಶುಶ್ರೂಷಕಿಯಾಗಿ ಯೆಮನ್ ದೇಶದಲ್ಲಿ ಕೆಲಸದಲ್ಲಿದ್ದರು. ಆಕೆಗೆ ಪ್ರಯಾಣ ನಿಷೇಧದ ಕುರಿತು ಸರ್ಕಾರ ಹೊರಡಿಸಿದ ಅಧಿಸೂಚನೆಯ ಬಗ್ಗೆ ಮಾಹಿತಿ ಇರಲಿಲ್ಲ.
2023ರ ಪ್ರಯಾಣದ ವೇಳೆ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡ ಬಳಿಕ ವಲಸೆ ಅಧಿಕಾರಿಗಳು ಶೋಕಾಸ್ ನೋಟಿಸ್ ಜಾರಿ ಮಾಡಿದ್ದರು, ತದನಂತರ ಅರ್ಜಿದಾರರು ಏಕೆ ಪ್ರಯಾಣ ಬೆಳೆಸಿದ್ದಾಳೆ ಎನ್ನುವ ಕುರಿತು ವಿಸ್ತಾರವಾದ ವಿವರಣೆ ನೀಡಿದ್ದಾರೆ. ಆದರೂ ಪಾಸ್‌ಪೋರ್ಟ್ ಹಿಂದಿರುಗಿಸಿಲ್ಲ ಎನ್ನುವುದನ್ನು ನ್ಯಾಯಪೀಠದ ಗಮನಕ್ಕೆ ತಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ವಿದೇಶದಲ್ಲಿ ಉದ್ಯೋಗ ಹೊಂದಲು ಅರ್ಜಿದಾರರಿಗೆ ಪಾಸ್‌ಪೋರ್ಟ್ ಅವಶ್ಯಕತೆ ಇದೆ. ಏಳು ವರ್ಷಗಳ ಕಾಲ ಪಾಸ್‌ಪೋರ್ಟ್ ಹಸ್ತಾಂತರಿಸದಿದ್ದಲ್ಲಿ ಆಕೆಯ ಉದ್ಯೋಗವನ್ನು ಕಸಿದುಕೊಂಡಂತಾಗುತ್ತದೆ. ಈ ವಿಚಾರದಲ್ಲಿ ಅರ್ಜಿದಾರರ ಮನವಿ ಪರಿಗಣಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿತು.