ಒಮ್ಮತದ ಮಂತ್ರ, ಅಮಿತ್ ಷಾ ತಂತ್ರ

IMG-20240402-WA0011
Published on

ಬೆಂಗಳೂರು: ಪಕ್ಷದ ಟಿಕೆಟ್ ವಂಚಿತ, ಮಾಜಿ ಸಿಎಂ ಡಿ.ವಿ.ಸದಾನಂದಗೌಡರನ್ನು ಮೊದಲಿಗೆ ಕರೆಯಿಸಿಕೊಂಡ ಕೇಂದ್ರ ಗೃಹ ಸಚಿವ ಅಮಿತ್ ಷಾ. ಪ್ರತ್ಯೇಕವಾಗಿ ಮಾತುಕತೆ ನಡೆಸುವ ಮೂಲಕ ಒಮ್ಮತದ ಮಂತ್ರ, ಮೊದಲ ರಣತಂತ್ರ ಎಂಬ ಸಂದೇಶವನ್ನು ಉಳಿದ ನಾಯಕರಿಗೆ ಪರೋಕ್ಷವಾಗಿ ರವಾನಿಸಿದ್ದಾರೆ.

ಮಂಗಳವಾರ ನಸುಕಿನ ಜಾವ ಬೆಂಗಳೂರಿಗೆ ಆಗಮಿಸಿದ ಷಾ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬರಮಾಡಿಕೊಂಡರು. ನಂತರ ತಾಜ್ ವೆಸ್ಟ್ ಎಂಡ್ ನಲ್ಲಿ ವಿಶ್ರಾಂತಿ ಪಡೆದ ಷಾ, ಬೆಳಗ್ಗೆಯೇ ಸದಾನಂದಗೌಡರಿಗೆ ಆಹ್ವಾನಿಸಿ ಚರ್ಚಿಸಿದರು. ಡಿವಿಎಸ್ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಸೇರಿ ಕೆಲವು ಕ್ಷೇತ್ರಗಳ ಒಟ್ಟಾರೆ ಮಾಹಿತಿ ಪಡೆದರು.

ದೇಶದ ಹಿತ, ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ವರಿಷ್ಠರು ತೆಗೆದುಕೊಂಡ ನಿರ್ಧಾರಗಳನ್ನು ನಿಮ್ಮಂತಹ ಹಿರಿಯರು ಒಪ್ಪಿ, ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಮುಂದಾಗಿರುವುದು ಕಾರ್ಯಕರ್ತರಲ್ಲಿ ಹೊಸ ಆಶಾಭಾವನೆ ಹುಟ್ಟಿಸಿ, ಸಂಘಟನೆಗೆ ಶ್ರಮಿಸುವ ಹುಮ್ಮಸ್ಸು ತುಂಬುತ್ತದೆ. ಪ್ರತಿಯೊಬ್ಬರ ತ್ಯಾಗ ಮತ್ತು ಪರಿಶ್ರಮವನ್ನು ಪಕ್ಷ ಸದಾ ಗಮನದಲ್ಲಿಟ್ಟುಕೊಂಡಿರುತ್ತದೆ ಎಂಬ ಭರವಸೆ ‌ಮಾತುಗಳನ್ನಾಡಿದ ಅಮಿತ್ ಷಾ, ಹೇಳಿದ್ದಕ್ಕಿಂತ ಸದಾನಂದ ಗೌಡರಿಂದ ಕೇಳಿಸಿಕೊಂಡದ್ದು ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಈಶ್ವರಪ್ಪಗೂ ಬುಲಾವ್

ಶಿವಮೊಗ್ಗದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿರುವ ಪಕ್ಷದ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೂ ಅಮಿತ್ ಷಾ ಕರೆ ಮಾಡಿ, ಸ್ಪರ್ಧೆಯ ಉದ್ದೇಶ ತಿಳಿದುಕೊಂಡು, ದೆಹಲಿಗೆ ಬರುವಂತೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ.

ನಂತರ ನಡೆದ  ಬಿಜೆಪಿ, ಜೆಡಿಎಸ್ ಜಂಟಿ ಕೋರ್ ಕಮಿಟಿ ಸಭೆಯಲ್ಲಿ ಎರಡು ಪಕ್ಷಗಳ ರಾಜ್ಯ ನಾಯಕರು ಮೇಲ್ಮಟ್ಟದಲ್ಲಿ ಸಮನ್ವಯ ಸಾಧಿಸಲು ಮಾಡಿರುವ ಪ್ರಯತ್ನದ ಬಗ್ಗೆ ತಿಳಿದು ಅಮಿತ್ ಷಾ ಖುಷ್ ಆಗಿದ್ದಾರೆ. ಮೈತ್ರಿ ಧರ್ಮ ಪಾಲನೆಗೆ ಉಭಯ ಪಕ್ಷಗಳ ಬದ್ಧತೆಯನ್ನು ತಳಮಟ್ಟಕ್ಕೆ ವಿಸ್ತರಣೆ ಕಾರ್ಯ ಮತ್ತಷ್ಟು ಚುರುಕುಗೊಳಿಸಲು, ಬೂತ್ ಅಧ್ಯಕ್ಷರಿಂದ ಲೋಕಸಭೆ ಕ್ಷೇತ್ರದವರೆಗೆ ಪರಸ್ಪರ ವಿಶ್ವಾಸ ಬೆಳೆಸಲು ಒತ್ತು ನೀಡಬೇಕು ಎಂಬ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಸಂಘಟನಾತ್ಮಕವಾಗಿ ಹೆಚ್ಚು, ಕಡಿಮೆ ಎನ್ನುವ ತಾರತಮ್ಯದ ಭಾವನೆ ಬೇಡ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಹಣಾಹಣಿ ನಡೆಸಿದ ಕ್ಷೇತ್ರಗಳಿಗೆ ಗಮನ ನೀಡಿ, ರಾಜ್ಯ ನಾಯಕರು ಹೆಚ್ಚೆಚ್ಚು ಬಾರಿ ಭೇಟಿ ನೀಡಿ, 28 ಸ್ಥಾನಗಳನ್ನು ಗೆಲ್ಲುವ ಗುರಿಗೆ ಅಡೆತಡೆ ಆಗಬಾರದು. ಜತೆಗೆ ಎದುರಾಳಿ ಪಕ್ಷ ಅಪನಂಬಿಕೆ ಸೃಷ್ಟಿಸಿ ಮೈತ್ರಿಯಲ್ಲಿ ಒಡಕು ತರುವ ಪ್ರಯತ್ನದ ಬಗ್ಗೆಯೂ ಎಚ್ಚರಿಕೆವಹಿಸಲು ಅಮಿತ್ ಷಾ ತಿಳಿಸಿ, ಒಗ್ಗಟ್ಟಿನ ಪಾಠ ಮಾಡಿದರು ಎನ್ನಲಾಗಿದೆ.

ಕುತೂಹಲದಿಂದ ಕಿವಿಗೊಟ್ಟರು

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಿದ್ಧತೆಗಳು, ಎಲ್ಲ ಕ್ಷೇತ್ರಗಳಲ್ಲಿ ವಸ್ತುಸ್ಥಿತಿ ವಿವರಿಸಿದರು. ಆದರೆ ಮಾಜಿ ಸಿಎಂ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಕಾರ್ಯತಂತ್ರ,‌ ಕಾಂಗ್ರೆಸ್ ನ ತಂತ್ರಗಾರಿಕೆ ಕುರಿತ ವಿವರಣೆ‌ ಬಗ್ಗೆ ಅಮಿತ್ ಷಾ ಕುತೂಹಲದಿಂದ ಕಿವಿಗೊಟ್ಟರು. ಮೋದಿ ಜನಪ್ರಿಯತೆ ಮತಗಳಾಗಿ ಪರಿವರ್ತಿಸಲು, ಎರಡೂ ಪಕ್ಷಗಳು ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕುರಿತು ಏನೆಲ್ಲ ಮಾಡಬೇಕೆಂಬ ಮಾಹಿತಿ ಹಂಚಿಕೊಂಡರು ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net