

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಮುಡಾ ಪ್ರಕರಣದಲ್ಲಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿ ದಿನ ಒಂದೊಂದೇ ದಾಳ ಉರುಳಿಸುತ್ತಿದ್ದು, ‘ಆತ್ಮಸಾಕ್ಷಿ’, ‘ನೈತಿಕತೆ’ಯ ನಿಲುವುಗಳನ್ನು ಖಚಿತಪಡಿಸುತ್ತಾ ಸಾಗಿದ್ದಾರೆ.
ದಸರಾ ವೇದಿಕೆ, ಗಾಂಧಿ ಜಯಂತಿ, ಪಕ್ಷದ ಕಾರ್ಯಕ್ರಮ, ಸರ್ಕಾರಿ ಸಭೆ ಹೀಗೆ ಅವಕಾಶ ಸಿಕ್ಕಲ್ಲೆಲ್ಲ ತಾವು ಯಾರಿಗೆ ಸಂದೇಶ ಕಳಿಸಬೇಕೋ ಕಳಿಸುತ್ತಿದ್ದು, ತಮ್ಮ ರಾಜಕೀಯ ಅನುಭವವನ್ನು ಧಾರೆ ಎರೆದು ರಾಜಕೀಯ ಚದುರಂಗ ದಾಟದಲ್ಲಿ ಜಾಣ್ಮೆಯ ನಡೆ ಅನುಸರಿಸುತ್ತಿದ್ದಾರೆ.
ಜಾರಿ ನಿರ್ದೇಶನಾಲಯ ಪ್ರಕರಣದ ತನಿಖೆಗೆ ಆರಂಭಿಸುತ್ತಿದ್ದಂತೆ ಪಕ್ಷ ದೊಳಗೆ ರಾಜೀನಾಮೆ ಚರ್ಚೆ, ವಿಶ್ಲೇಷಣೆ ಜೋರಾಗುತ್ತಿದ್ದಂತೆ, ಪ್ರತಿಪಕ್ಷದವರಿಗೆ, ಸ್ವಪಕ್ಷೀಯರಿಗೆ ಸ್ಪಷ್ಟ ಸಂದೇಶ ಕಳಿಸುವ ಕೆಲಸವನ್ನೂ ಮಾಡಿದ್ದಾರೆ. ನಾನು ತಪ್ಪು ಮಾಡಿಲ್ಲವಾದ್ದರಿಂದ ರಾಜೀನಾಮೆ ನೀಡುವ ಅಗತ್ಯವಿಲ್ಲ. ಜಾಮೀನಿನ ಮೇಲಿರುವ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ನೀಡಿದ್ದಾರೆಯೇ? ಎಂದು ಮೈಸೂರಿನಲ್ಲಿ ವರಸೆ ತೆಗೆದ ಸಿಎಂ, ಪ್ರತಿಪಕ್ಷಗಳ ರಾಜೀನಾಮೆ ಕೋರಿಕೆ ಬೇಡಿಕೆಗೆ ತಿರುಗುಬಾಣ ಹೂಡಿದ್ದರು. ಸಹಜವಾಗಿ ಜೆಡಿಎಸ್ ಮೆತ್ತಗಾದಂತೆಯೂ ಕಾಣಿಸಿತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೇಲೆ ಪ್ರಕರಣ ದಾಖಲಾದಾಗಲೂ ಸಿಎಂ ಪಡೆ ಸಮಾಧಾನ ಗೊಂಡಿತ್ತು, ಅವರ ರಾಜೀನಾಮೆಗೂ ಆಗ್ರಹಿಸಿತ್ತು.
ಕಳೆದೊಂದು ವಾರದಲ್ಲಿ ಐದಾರು ಬಾರಿ ‘ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ’ ಎಂದು ಪುನರುಚ್ಚರಿಸುತ್ತಲೇ ಬಂದಿರುವ ಸಿದ್ದರಾಮಯ್ಯ, ಆತ್ಮಸಾಕ್ಷಿಯಾಗಿ ಕೆಲಸ ಮಾಡುತ್ತೇನೆ; ರಾಜೀನಾಮೆ ಅಗತ್ಯವಿಲ್ಲ ಎಂದಿದ್ದರು. ಮುಡಾಗೆ ನಿವೇಶನ ಹಿಂತಿರುಗಿಸಿದ ಬಳಿಕ ನಡೆದ ಟೀಕೆಗೂ ಖಾರವಾದ ಉತ್ತರ ನೀಡಿದ್ದಲ್ಲದೇ ಕೊಂಚ ಸಮಾಧಾನಿತರಾಗಿಯೂ ಕಾಣಿಸಿದ್ದರು. ವಿಧಾನಸೌಧದಲ್ಲಿ ನಡೆದ ಮಹಾತ್ಮಗಾಂಧಿ ಜನ್ಮ ದಿನಾಚರಣೆ ಮತ್ತು ಸ್ವಚ್ಛತಾ ಆಂದೋಲನಾ ಪ್ರತಿಜ್ಞಾ ವಿಧಿ ಕಾರ್ಯಕ್ರಮದಲ್ಲಿ, ಆತ್ಮಸಾಕ್ಷಿಯ ನ್ಯಾಯಾಲಯ ಎಲ್ಲ ನ್ಯಾಯಾಲಯಗಳಿಗಿಂತ ಮಿಗಿಲಾದದು ಎಂದು ಉಚ್ಛರಿಸಿ, ನ್ಯಾಯಾಲಯಗಳಲ್ಲಿ ನ್ಯಾಯ ಸಿಗದೇ ಹೋಗಬಹುದು. ಆದರೆ ನಾವು ಆತ್ಮಸಾಕ್ಷಿಗೆ ತಕ್ಕಂತೆ ನಡೆದುಕೊಳ್ಳಬೇಕು ಎಂದು ಮಾರ್ವಿುಕ ಅಭಿಪ್ರಾಯ ಹೊರಹಾಕಿದ್ದರು.
ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾನೂನು ಮತ್ತು ಕಾನ್ಸಿ್ಪರೆಸಿ ಬಗ್ಗೆ ಸಿಎಂ ಪ್ರಸ್ತಾಪಿಸಿದ್ದರು. ಕಾನ್ಸಿ್ಪರೆಸಿ ಮೂಲಕ ಕಾನೂನನ್ನು ಸೋಲಿಸಲು ಯತ್ನಿಸಿ ರಾಜಕೀಯ ಅಸ್ಥಿರತೆ ಸೃಷ್ಟಿಸುತ್ತಿದೆ ಎಂದು ಅಸಹನೆ ಹೊರಹಾಕಿದ್ದರು.
ಮಾಧ್ಯಮಗಳ ಬಗೆಯೂ ಅವರ ಅಸಮಾಧಾನ ವ್ಯಕ್ತಪಡಿಸಿ, ಈಗ ಊಹಾ ಪತ್ರಿಕೋದ್ಯಮದ ಪಿಡುಗು ಹೆಚ್ಚಾಗಿದೆ. ಈ ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಬೇಕಾ ಎಂದು ಪ್ರಶ್ನೆ ಎತ್ತಿ, ಅವರು ಹಿಂಗೆ ಹೇಳಿದ್ರು, ನೀವೇನು ಹೇಳ್ತೀರಾ? ಅಂತ ಮುಖಕ್ಕೆ ಮೈಕ್ ಹಿಡಿಯೋದೇ ಇವತ್ತಿನ ಪತ್ರಿಕೋದ್ಯಮ ಆಗಿಬಿಟ್ಟಿದೆ. ಇದು ಯಾವ ರೀತಿ ಪತ್ರಿಕೋದ್ಯಮ ನನಗಂತೂ ಅರ್ಥ ಆಗ್ತಾ ಇಲ್ಲ ಎಂದು ಹೇಳುವ ಮೂಲಕ ಮುಡಾ ವಿಷಯ ಚರ್ಚೆ ಹೆಚ್ಚಾಗಲು ಕಾರಣವಾಗಿದ್ದಕ್ಕೆ ಪರೋಕ್ಷ ಬೇಸರ ಹೊರಹಾಕಿದಂತೆಯೇ ಕಾಣಿಸಿತು. ಸಿಎಂ ವ್ಯಾಖ್ಯಾನ ಸರಣಿ ಮೈಸೂರು ದಸರಾ ವೇದಿಕೆಗೂ ವಿಸ್ತರಣೆಯಾಯಿತು. ಚುನಾಯಿತ ಸರ್ಕಾರ ಕಿತ್ತುಹಾಕುವ ಕುರಿತ ದಸರಾ ಉದ್ಘಾಟಕ ಹಂ.ಪ.ನಾಗರಾಜಯ್ಯ ಹೇಳಿಕೆ ತಾವು ಎದುರಿಸುತ್ತಿರುವ ಸಂದರ್ಭಕ್ಕೂ ಅನ್ವಯ ಎಂಬಂತೆ ಸಿಎಂ ವಿಶ್ಲೇಷಣೆ ಮಾಡಿದರು. ಎಷ್ಟೇ ತೊಡಕು ಎದುರಾದರೂ, ತಾಯಿ ಚಾಮುಂಡೇಶ್ವರಿ ಆಶೀರ್ವಾದ ನಮ್ಮ ಮೇಲಿದೆ. ಐದು ವರ್ಷಗಳ ಕಾಲ ನಾವು ಆಡಳಿತ ಮಾಡಿಯೇ ಮಾಡುತ್ತೇವೆ ಎಂದು ಉದ್ಗರಿಸಿ ತಮ್ಮ ಆತ್ಮವಿಶ್ವಾಸ ಕಡಿಮೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಜಾರಿ ನಿರ್ದೇಶನಾಲಯವು ಮುಡಾ ಪ್ರಕರಣದಲ್ಲಿ ತನಿಖೆ ಆರಂಭಿಸುತ್ತಿದ್ದಂತೆ ಕಾಂಗ್ರೆಸ್ನಲ್ಲೂ ತಳಮಳ ಹೆಚ್ಚಾಗಿದೆ. ಪಕ್ಷದ ದೆಹಲಿ ನಾಯಕರು ಇಡಿ ನಡೆ ಬಗ್ಗೆ ಕುತೂಹಲಿಗಳಾಗಿ ಪ್ರತಿ ಬೆಳವಣಿಗೆಯ ಮಾಹಿತಿ ತರಿಸಿಕೊಳ್ಳಲಾರಂಭಿಸಿದ್ದಾರೆ. ತನಿಖೆಯ ಹಾದಿ, ವೇಗ, ಮುಂದಾಗಬಹುದಾದ ಪ್ರಕ್ರಿಯೆ ಕುರಿತು ಹೈಕಮಾಂಡ್ ಹಂತದಲ್ಲಿ ಚರ್ಚೆಯೂ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಜತೆಗೆ ‘ನಿರೀಕ್ಷಿತ’ ಬೆಳವಣಿಗೆಗೆ ಯಾವ ರೀತಿ ಪ್ರತಿರೋಧ ತೋರಬೇಕು, ರಾಷ್ಟ್ರೀಯ ಮಟ್ಟದಲ್ಲಿ ಆಗಬೇಕಾದ ತಯಾರಿ ಕುರಿತು ವಿಚಾರ ವಿನಿಮಯ ನಡೆಸಿದ್ದಾರೆನ್ನಲಾಗಿದೆ.
ಸಿಎಂ ರಾಜೀನಾಮೆ ಕೊಡಬೇಕಿಲ್ಲ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಮುಡಾದಲ್ಲಿ ಅವರ ಅಕ್ರಮವೂ ಇರಬಹುದು. ಈ ಮೂಲಕ ಕಳ್ಳರು ಕಳ್ಳರು ರಕ್ಷಣೆಗಾಗಿ ಕೂಟ ರಚಿಸಿಕೊಂಡಿದ್ದಾರೆ. ಸೇಲ್ ಡೀಡ್ ಮೂಲಕ ಮುಡಾದಲ್ಲಿ ಅಕ್ರಮ ಆಗಿದೆ. ಆ ಬಗ್ಗೆಯೂ ಲೋಕಾಯುಕ್ತ, ಇಡಿ ಅಧಿಕಾರಿಗಳಿಗೆ ಮಾಹಿತಿ ಕೊಡಲಾಗಿದೆ. | ಸ್ನೇಹಮಯಿ ಕೃಷ್ಣ ದೂರುದಾರ
ಕೊಪ್ಪಳ: ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಂಪುಟ ಸಭೆಯಲ್ಲಿ ಒಳಮೀಸಲು ಜಾರಿ ವಿಷಯ ರ್ಚಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಈ ವಿಷಯವಾಗಿ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದೆ. ಚರ್ಚೆ ಬಳಿಕ ಜಾರಿ ನಿರ್ಧಾರ ಮಾಡಲಾಗುವುದು. ಜಾತಿ ಗಣತಿ ವರದಿ ಸ್ವೀಕರಿಸಿದ್ದು, ಸಂಪುಟ ಹಾಗೂ ಸದನದಲ್ಲಿ ರ್ಚಚಿಸಬೇಕಿದೆ. ಈ ಬಗ್ಗೆ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ನನ್ನೊಂದಿಗೆ ರ್ಚಚಿಸಿದ್ದಾರೆ. ಸಂಬಂಧಿಸಿದ ಸಚಿವರೊಂದಿಗೆ ರ್ಚಚಿಸಿ ಮುಂದಿನ ನಡೆ ತಿಳಿಸುವೆ ಎಂದು ಬಸಾಪುರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ನಾನು ಅಧಿಕಾರದಲ್ಲಿದ್ದಷ್ಟು ದಿನ ಬಿಜೆಪಿ-ಜೆಡಿಎಸ್ ನಾಯಕರು ದುರ್ಬಲ ಆಗುತ್ತೇವೆ ಎಂಬ ಅರಿವು ಅವರಿಗಿದೆ. ಆ ಭಯದಿಂದಲೇ ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ಶಾಸಕ ಜಿ.ಟಿ.ದೇವೆಗೌಡ ನಮ್ಮ ಪಕ್ಷದವರಲ್ಲ. ಆದರೂ, ಅವರು ಹೇಳಿದ್ದು ಸರಿಯಾಗಿದೆ. ಮುಂದಿನ ವರ್ಷವೂ ದಸರಾ ಕಾರ್ಯಕ್ರಮ ನಡೆಯಲಿದೆ. ಆಗಲೂ ಉದ್ಘಾಟನೆಗೆ ತೆರಳುವೆ. ಅದಕ್ಕೆ ಒಂದು ವರ್ಷ ಅಭಿವೃದ್ಧಿ ಕೆಲಸಗಳಿಗೆ ಅವಕಾಶ ನೀಡುವಂತೆ ಆಶೀರ್ವಾದ ಬೇಡಿರುವೆ. ಹಾಗಂತ ಕೇವಲ ಒಂದು ವರ್ಷ ಅಧಿಕಾರದಲ್ಲಿರುವೆ ಎಂದರ್ಥವಲ್ಲ. ನಾನು ದೆಹಲಿ ಪ್ರವಾಸ ಹಮ್ಮಿಕೊಂಡಿಲ್ಲ. ಅದೆಲ್ಲ ಸುಳ್ಳು. ಸತೀಶ ಜಾರಕಿಹೊಳಿ ಯಾವುದೋ ಕಾರಣಕ್ಕೆ ಎಐಸಿಸಿ ಅಧ್ಯಕ್ಷರನ್ನು ಭೇಟಿ ಆಗಿರಬಹುದು. ಹಾಗಂತ ನಾನು ಸಿಎಂ ಸ್ಥಾನದಿಂದ ಇಳಿಯುವೆ ಎಂದರ್ಥವಲ್ಲ. ಸಕಾರಾತ್ಮಕವಾಗಿಯೂ ಯೋಚಿಸಬೇಕೆಂದು ರೇಗಿದರು.
ಮೈಸೂರು: ಮುಡಾ ನಿವೇಶನಗಳ ಅಕ್ರಮ ಹಂಚಿಕೆ ಆರೋಪ ಪ್ರಕರಣದ ತನಿಖೆ ಕೈಗೊಂಡಿರುವ ಲೋಕಾಯುಕ್ತ ಪೊಲೀಸರು ಶುಕ್ರವಾರ, ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರಿಗೆ ಹಂಚಿಕೆಯಾಗಿದ್ದ 14 ನಿವೇಶನಗಳ ಸ್ಥಳ ಮಹಜರು ನಡೆಸಿದರು.
ಲೋಕಾಯುಕ್ತ ಎಸ್. ಪಿ.ಉದೇಶ್ ನೇತೃತ್ವದ ತನಿಖಾಧಿ ಕಾರಿಗಳ ತಂಡ ವಿಜಯನಗರ 3ನೇ ಹಂತದ ಸಿ ಬ್ಲಾಕ್ನಲ್ಲಿರುವ ನಿವೇಶನ ಸಂಖ್ಯೆ 25ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಅಧಿಕಾರಿಗಳ ಜತೆ ದೂರುದಾರ ಸ್ನೇಹಮಯಿ ಕೃಷ್ಣ, ಮುಡಾ ಅಧಿಕಾರಿಗಳು ಇದ್ದರು.
ಸಿಎಂ ಪತ್ನಿ ಪಾರ್ವತಿ ಅವರ ಪತ್ರ ಆಧರಿಸಿ ನಿವೇಶನಗಳ ಕ್ರಯಪತ್ರಗಳನ್ನು ಆಯುಕ್ತರು ರದ್ದುಗೊಳಿಸಿ ಆದೇಶಿಸಿದ್ದರು. ನಂತರ, ಉಪನೋಂದಣಾಧಿಕಾರಿ ನೇತೃತ್ವದಲ್ಲಿ ಅಧಿಕಾರಿಗಳು ಪಾರ್ವತಿ ಅವರ ಸಹಿ ಪಡೆದು ಕ್ರಯಪತ್ರಗಳ ನೋಂದಣಿ ರದ್ದುಗೊಳಿಸಿದ್ದರು. ಈಗ ನಿವೇಶನಗಳು ಮುಡಾ ಹೆಸರಿಗೆ ಖಾತೆಯಾಗಿವೆ. ಉಪನೋಂದಣಿ ಇಲಾಖೆಯ ಋಣಭಾರ ಪತ್ರದಲ್ಲೂ ಮುಡಾ ಹೆಸರು ನಮೂದಾಗಿದೆ. ಅಲ್ಲದೆ, ಲೋಕಾಯುಕ್ತ ಪೊಲೀಸರು ಶುಕ್ರವಾರವೂ ಮುಡಾ ಕಚೇರಿಯಲ್ಲಿ ದಾಖಲೆಗಳ ಶೋಧ ಮುಂದುವರಿಸಿದರು. ಕೆಸರೆ ಗ್ರಾಮದ ಸರ್ವೆ ಸಂಖ್ಯೆ 464ಕ್ಕೆ ಸಂಬಂಧಿಸಿದ ದಾಖಲೆಗಳು, ದೇವನೂರು ಬಡಾವಣೆ ನಿರ್ವಣದ ನಕ್ಷೆ, ಆ ಬಡಾವಣೆಯಲ್ಲಿ ಹಂಚಿಕೆಯಾದ ಹಾಗೂ ಖಾಲಿ ಇರುವ ನಿವೇಶನಗಳು, ಮುಡಾ ಸಭೆಯ ನಡಾವಳಿ ಸೇರಿ ಕೆಲ ದಾಖಲೆಗಳ ಮೂಲಪ್ರತಿಗಳನ್ನು ಪರಿಶೀಲಿಸಲಾಯಿತು. ವಿವಾದಿತ ಜಮೀನಿಗೆ ಸಂಬಂಧಿಸಿದ ಆಕಾರ್ ಬಂದ್, ಎಡ-ಬಲ ನಕ್ಷೆ ಮೊದಲಾದ ದಾಖಲೆಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ದಸರಾ ಉದ್ಘಾಟನಾ ಸಮಾರಂಭವನ್ನು ರಾಜಕೀಯಗೊಳಿಸಿರುವ ಸಿದ್ದರಾಮಯ್ಯ ಸರ್ಕಾರ, ಚಾಮುಂಡೇಶ್ವರಿ ದೇವಿಗೆ ಅವಮಾನ ಮಾಡಿದೆ. ನಾಡಹಬ್ಬದ ಪರಂಪರೆ, ಮೈಸೂರು ಅರಸರ ಕೊಡುಗೆ ಕುರಿತಂತೆ ಮಾತನಾಡುವ ದಸರಾದಲ್ಲಿ ಸರ್ಕಾರ ಹೊಸ ಪರಂಪರೆಗೆ ನಾಂದಿ ಹಾಡಿದೆ. ಸರ್ಕಾರಕ್ಕೆ ತಾಯಿ ಶಿಕ್ಷೆ ಕೊಡುತ್ತಾಳೆ. | ಆರ್. ಅಶೋಕ್ ಪ್ರತಿಪಕ್ಷ ನಾಯಕ