

TRAI: 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಆರಂಭಿಸಿದ್ದ ಎಸ್ಎಂಎಸ್ ಅಭಿಯಾನವನ್ನು ಟ್ರಾಯ್ (ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ನಿರ್ಬಂಧಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಈ ಆರೋಪವನ್ನು ಟ್ರಾಯ್ ತಿರಸ್ಕರಿಸಿದೆ ಎಂದು ಸೋಮವಾರ (ಸೆ. 08) ವರದಿಯಾಗಿದೆ.
ಭಾನುವಾರ, ಕಾಂಗ್ರೆಸ್ 'MH 2024ರ ಚುನಾವಣೆಯನ್ನು ಹೇಗೆ ಕದ್ದರು' ಎಂಬ ಶೀರ್ಷಿಕೆಯ YouTube ಸಾಕ್ಷ್ಯಚಿತ್ರದ ಲಿಂಕ್ ಅನ್ನು ತನ್ನ ಮಹಾರಾಷ್ಟ್ರದ ಸದಸ್ಯರಿಗೆ ಬೃಹತ್ ಎಸ್ಎಂಎಸ್ ಕಳುಹಿಸುವ ಅಭಿಯಾನವನ್ನು ಹಮ್ಮಿಕೊಂಡಿತ್ತು. ಆದರೆ ಟ್ರಾಯ್ ಈ ಅಭಿಯಾನವನ್ನು ನಿರ್ಬಂಧಿಸಿದ್ದು, ಇದು ಪ್ರತಿಭಟನಾ ವಿಷಯ ಎಂದು ಕರೆದಿದೆ ಎಂದು ಆರೋಪಿಸಿದೆ.
ಈ ಕುರಿತು ಆರೋಪ ಮಾಡಿರುವ ವೃತ್ತಿಪರ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪ್ರವೀಣ್ ಚಕ್ರವರ್ತಿ, ಗೃಹ ಸಚಿವಾಲಯ, ಚುನಾವಣಾ ಆಯೋಗ ಮತ್ತು ದೂರಸಂಪರ್ಕ ನಿಯಂತ್ರಕರು ಮೂರು ಸಂಸ್ಥೆಗಳ ಸೇರಿ ನಮ್ಮ ಎಸ್ಎಂಎಸ್ ಸಂಪರ್ಕವನ್ನು ತಡೆಯಲು ಇಷ್ಟೊಂದು ಪರಿಪೂರ್ಣ ಸಮನ್ವಯ ಹೇಗೆ ಸಾಧ್ಯ? ಮಾಹಿತಿಯನ್ನು ನಿಗ್ರಹಿಸಲು ಮತ್ತು ಮರೆಮಾಡಲು ಈ ಕ್ರಮಗಳಿಗಿಂತ ಮಹಾರಾಷ್ಟ್ರ ಚುನಾವಣಾ ವಂಚನೆಗೆ ಹೆಚ್ಚಿನ ಪುರಾವೆಗಳು ಬೇಕೇ?" ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಟ್ರಾಯ್, ನಿಯಂತ್ರಕರು ಪ್ರಶ್ನಾರ್ಹ SMS ಅನುಮೋದನೆಗಾಗಿ ಯಾವುದೇ ಅರ್ಜಿಯನ್ನು ಸ್ವೀಕರಿಸಿಲ್ಲ. TRAI ವೈಯಕ್ತಿಕ ಎಸ್ಎಂಎಸ್ ಟೆಂಪ್ಲೇಟ್‌ಗಳನ್ನು ಅನುಮೋದಿಸುವುದಿಲ್ಲ. ಪ್ರಸಾರವಾಗುತ್ತಿರುವ ಛಾಯಾಚಿತ್ರದಲ್ಲಿ ತೋರಿಸಿರುವಂತೆ ನಿರಾಕರಣೆಯು ಸೇವಾ ಪೂರೈಕೆದಾರರಾದ STP ಯಿಂದ ಬಂದಿದೆ, TRAI ನಿಂದ ಅಲ್ಲ ಎಂದು ಹೇಳಿದೆ.
2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಅಭಿಯಾನ ನಡೆಸುತ್ತಿದೆ. ಬಲ್ಕ್ SMS ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನಡೆದಿದೆ ಎಂದು ಹೇಳಲಾದ ಅಕ್ರಮಗಳನ್ನು ಪ್ರಚಾರ ಮಾಡಲು ಯೂಟ್ಯೂಬ್ ಸಾಕ್ಷ್ಯಚಿತ್ರವು ಲಿಂಕ್ನೊಂದಿಗೆ ಶೇರ್ ಮಾಡಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)