ಮಾದರಿ ನೀತಿಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್: ಸಿ.ಟಿ.ರವಿ ಆರೋಪ

allwyn_280920_ctravi1
Published on

ಬೆಂಗಳೂರು:
ವಾಲ್ಮಿಕಿ ಜಯಂತಿ ಬಗ್ಗೆ ಜಾಹೀರಾತು ನೀಡಿರುವ ಕಾಂಗ್ರೆಸ್ ಸರ್ಕಾರ ಮಾದರಿ ನೀತಿಸಂಹಿತೆ ಉಲ್ಲಂಘಿಸಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಚುನಾವಣೆ ೋಷಣೆಯಾಗಿರುವ ಕಾರಣ ಚುನಾವಣಾ ಆಯೋಗವು ಈ ವಿಷಯದಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಮೂರು ಉಪ ಚುನಾವಣೆಗಳು ನಡೆಯುತ್ತಿವೆ. ನೀತಿ ಸಂಹಿತೆ ಜಾರಿಯಲ್ಲಿದೆ. ಅವರಿಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣಗಳಿಂದ ಪಾರಾಗುವ ಭಯ ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ. ಅದರಿಂದ ರಕ್ಷಣೆ ಪಡೆಯಲು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ರಾಯಚೂರು ವಿಶ್ವವಿದ್ಯಾಲಯಕ್ಕೆ ವಾಲ್ಮೀಕಿ ಹೆಸರಿಡುವುದಾಗಿ ಹೇಳಿದ್ದಾರೆ ಎಂದು ಆಕ್ಷೇಪಿಸಿದರು.
ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಅವರಿಗೆ ರಾಯಚೂರು ವಿಶ್ವವಿದ್ಯಾಲಯಕ್ಕೆ ಮಹರ್ಷಿ ವಾಲ್ಮೀಕಿ ಹೆಸರು ಇಡಬೇಕೆಂದು ಯಾಕೆ ಜ್ಞಾನೋದಯ ಆಗಿರಲಿಲ್ಲ? ಕಾಂಗ್ರೆಸ್‌ಗೆ ವಾಲ್ಮಿಕಿ ಸಮುದಾಯದ ಮತಗಳು ಕೈತಪ್ಪುವ ಭೀತಿ ಕಾಡುತ್ತಿದೆ. ಆ ಭೀತಿಯಿಂದ ವಾಲ್ಮೀಕಿ ಹೆಸರು ಇಡುವುದಾಗಿ ಹೇಳಿದ್ದಾರೆ ಎಂದು ಟೀಕಿಸಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೂಟಿ ಹೊಡೆದಿದ್ದೀರಲ್ಲಾ? ಅದಕ್ಕೆ ಮೊದಲು ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಆಗ್ರಹಿಸಿದರು.
2006-07ರಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಪ್ರಾರಂಭಿಸಿದ್ದು, 2011ರಲ್ಲಿ ಮೊದಲ ಬಾರಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಾರಂಭಿಸಿದ್ದೇ ಬಿಜೆಪಿ ಸರ್ಕಾರ ಎಂದರು.
ಕಾಂಗ್ರೆಸ್ ಪಕ್ಷವು ರಾಮನ ಅಸ್ತಿತ್ವವನ್ನೇ ನಿರಾಕರಿಸಿತ್ತು. ಅಲ್ಲದೆ, ರಾಮಸೇತು ಕಾಲ್ಪನಿಕ, ರಾಮಾಯಣವೇ ಕಾಲ್ಪನಿಕ ಎಂದು ಹೇಳಿತ್ತು. ಇವತ್ತು ಕಾಂಗ್ರೆಸ್ ಪಕ್ಷಕ್ಕೆ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸುವಂಥ ನೈತಿಕತೆ ಅವರಿಗೆ ಇಲ್ಲ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರುಪಯೋಗ ಮಾಡಿಕೊಂಡ ಕಾರಣಕ್ಕೆ ಅವರು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕು. ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕೆಂದು ಆಗ್ರಹಿಸಿದರು.

ತ್ರಿಮೂರ್ತಿಗಳ ಸಭೆಯಿಂದ ಭಯ..
ಎಐಸಿಸಿ ಮಹಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಸಿಎಂ, ಡಿಸಿಎಂ ಸೇರಿ ತ್ರಿಮೂರ್ತಿಗಳು ಮೀಟಿಂಗ್ ಮಾಡಿದ ಫೋಟೊ ನೋಡಿದ್ದೇನೆ. ಅದರಿಂದ ಭಯ ಕಾಡುತ್ತಿದೆ. ಹಿಂದಿನ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆಗೆ ಬಳಸಿದ್ದರು. ಈಗ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಇದೆ. ಈಗಲೂ ಚುನಾವಣೆಗೆ ಇಷ್ಟು ಕೊಡಬೇಕೆಂದು ನಿಗದಿ ಮಾಡಿರಬೇಕೆಂದು ಅನಿಸುತ್ತದೆ ಎಂದರು.
ಕಾಂಗ್ರೆಸ್ಸಿನವರು ಮುಡಾ ಮುಳುಗಿಸಿದ್ದಾರೆ. ಬಿಡಿಎ ಅಥವಾ ಇನ್ಯಾವುದೋ ನಿಗಮ ಅಥವಾ ಖಜಾನೆಗೇ ಕೈ ಹಾಕಿ ಖಜಾನೆಯಿಂದಲೇ ವರ್ಗಾವಣೆ ಮಾಡುತ್ತೀರಾ? ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net