ಸೋನಿಯಾ ಅಧ್ಯಕ್ಷರಾಗದೇ ಇರುತ್ತಿದ್ದರೆ ಕಾಂಗ್ರೆಸ್ ಮುಕ್ತ ಭಾರತವಾಗುತ್ತಿತ್ತು; ಜಾರ್ಜ್

kj George
Published on

ಬೆಂಗಳೂರು: ಎಲ್ಲಾ ಸಮುದಾಯಗಳನ್ನು ನಮ್ಮ ಪಕ್ಷ ಒಳಗೊಳ್ಳುತ್ತದೆ. ಪ್ರತಿಪಕ್ಷದವರು ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡುತ್ತಾರೆ. ಈ ದೇಶದ ಪ್ರಗತಿಗೆ ಏನೂ ಬೇಕೋ ಎಲ್ಲವನ್ನು ಕಾಂಗ್ರೆಸ್ ಮಾಡಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನಾಚರಣೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ನಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ. ಈ ಹಿಂದೆಯೂ ಪಕ್ಷದಲ್ಲಿ ಜಾತಿ ಆಧಾರವಾಗಿಯೇ ಟಿಕೆಟ್ ಹಾಗೂ ಸ್ಥಾನಗಳನ್ನು ನೀಡಲಾಗುತ್ತಿತ್ತು. ಲಿಂಗಾಯತರು, ಒಕ್ಕಲಿಗರು, ಪರಿಶಿಷ್ಟರು, ಹಿಂದುಳಿದ ವರ್ಗದವರು ಹೀಗೆ ಎಲ್ಲಾ ಸಮುದಾಯಗಳ ಸಂಗಮ ಕಾಂಗ್ರೆಸ್ ಪಕ್ಷ ಎಂದರು.

ನನ್ನ ರಾಜಕೀಯ ಜೀವನದಲ್ಲಿ ಮರೆಯಲು ಆಗದಂತಹ ವ್ಯಕ್ತಿ ರಾಜೀವ್ ಗಾಂಧಿ. 1969 ನೇ ಇಸವಿಯಲ್ಲಿ ಗೋಣಿಕೊಪ್ಪದಂತಹ ಸಣ್ಣ ಊರಿನಿಂದ ಬೆಳೆದ ವ್ಯಕ್ತಿ. ಈ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇರಲಿಲ್ಲ. ನನ್ನ ಊರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಘಟಾನುಘಟಿ ನಾಯಕರು ಯಾರೂ ಇರಲಿಲ್ಲ. ಎಲ್ಲರೂ ಸಂಸ್ಥಾ ಕಾಂಗ್ರೆಸ್ ಸೇರಿದ್ದರು ಎಂದು ಹಳೆಯ ಘಟನೆ ನೆನಪಿಸಿಕೊಂಡರು.

ರಾಜೀವ್ ಗಾಂಧಿ ಅವರು ನನಗೆ ರಾಜಕೀಯವೇ ಬೇಡ ಎಂದು ಪೈಲೆಟ್ ಆಗಿದ್ದರು. ಸಂಜಯ್ ಗಾಂಧಿ ಅವರ ಮರಣದ ನಂತರ ಅನಿವಾರ್ಯವಾಗಿ ರಾಜಕೀಯಕ್ಕೆ ಬಂದರು. ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾಗದೇ ಇರುತ್ತಿದ್ದರೆ ಕಾಂಗ್ರೆಸ್ ಮುಕ್ತ ಭಾರತವಾಗುತ್ತಿತ್ತು. ಪಕ್ಷ ಕಟ್ಟಿ 10 ವರ್ಷಗಳ ಕಾಲ ದೇಶವನ್ನು ಮನಮೋಹನ್ ಸಿಂಗ್ ನೇತೃತ್ವದಲ್ಲಿ ಮುನ್ನಡೆಸಿದರು ಎಂದು ಹೇಳಿದರು.

ರಾಜಕೀಯದಲ್ಲಿ ಟಿಕೆಟ್ ಹಾಗೂ ಮಂತ್ರಿ ಮಾಡಿ ಎಂದು ಕೇಳಿರಲಿಲ್ಲ. ವಿರೇಂದ್ರ ಪಾಟೀಲ್ ಅವರು ರಾಜೀವ್ ಗಾಂಧಿ ಅವರ ನಿರ್ದೇಶನದ ಮೇರೆಗೆ ಕೆಎಸ್‌ಆರ್‌ಟಿಸಿ ಅಧ್ಯಕ್ಷನನ್ನಾಗಿ ಮಾಡಿದರು, ಗುಲ್ಬರ್ಗಾ ಜಿಲ್ಲಾ ಉಸ್ತುವಾರಿ, ಮೈಸೂರು ದಸರಾ ಉಸ್ತುವಾರಿ ಮಾಡಿದರು ಎಂದರು.

ರಾಜೀವ್ ಗಾಂಧಿ ಅವರು ಕರ್ನಾಟಕದ ಮೂಲಕವೇ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದರು. ಟೆಲಿಫೋನ್ ಕ್ರಾಂತಿ, ಐಟಿ ಕ್ರಾಂತಿಗೆ ರಾಜೀವ್ ಗಾಂಧಿ ಕಾರಣ. ಇವರ ಜತೆ ಇದ್ದ ಸ್ಯಾಮ್ ಪಿತ್ರೋಡ ಅವರು ಬೆನ್ನೆಲುಬಾಗಿ ಇದ್ದರು. ಎಲ್ಲರೂ ಸೇರಿ ಕಟ್ಟಿದ ದೇಶವನ್ನು ಹಾಳು ಮಾಡಿದವರೇ ಬಿಜೆಪಿ ಮತ್ತು ಮೋದಿ ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net