ನಾಮನಿರ್ದೇಶಿತ ಎಂಎಲ್​ಸಿ ಸ್ಥಾನಕ್ಕೆ ತೀವ್ರ ಪೈಪೋಟಿ; ರಾಜ್ಯ ನಾಯಕರ ವಿರುದ್ಧ ವರಿಷ್ಠರಿಗೆ ಪತ್ರ ಬರೆದ ಕಾರ್ಯಕರ್ತರು

Congress (4)
Published on

ಬೆಂಗಳೂರು: ನಾಮನಿರ್ದೇಶಿತ ಎಂಎಲ್​​​​ಸಿ ಸ್ಥಾನಗಳಿಗೆ ತೀವ್ರ ಪೈಪೋಟಿ ನಡೆದಿದ್ದು, ರಾಜ್ಯ ನಾಯಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ವರಿಷ್ಠರಿಗೆ ಪತ್ರ ಬರೆದಿದ್ದಾರೆ. ರಾಜ್ಯ ನಾಯಕರು ಬೇರೆಯವರ ಆಯ್ಕೆಗೆ ಮುಂದಾಗಿದ್ದು, ನಾಯಕರ ಆಯ್ಕೆಗೆ ನೀವು ಸಮ್ಮತಿ ನೀಡಬೇಡಿ. ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಿ ಎಂದು ಕೋರಲಾಗಿದೆ.

ವಿಧಾನಪರಿಷತ್​​​ನ ಮೂರು ಸ್ಥಾನಗಳು ತೆರವಾಗಿವೆ. ಪಿ.ಆರ್.ರಮೇಶ್, ಮೋಹನ್ ಕೊಂಡಜ್ಜಿ, ಸಿ.ಎಂ.ಲಿಂಗಣ್ಣ ಅವರ ಸ್ಥಾನ ತೆರವಾಗಿದ್ದು, ಅವಧಿ ಮುಗಿದ ಹಿನ್ನೆಲೆಯಲ್ಲಿ ಮೂವರು ನಿವೃತ್ತಿಯಾಗಿದ್ದಾರೆ. ಆದರೆ ಈಗ ರಾಜ್ಯ ನಾಯಕರು ಕೆಲವರ ಹೆಸರನ್ನು ಫೈನಲ್ ಮಾಡಿದ್ದು, ಎಂ.ಆರ್.ಸೀತಾರಾಂ, ಮನ್ಸೂರ್, ಸುಧಾಂದಾಸ್ ಗೆ ಕೊಡಲು ಮುಂದಾಗಿದ್ದಾರೆ. ಎಂ.ಆರ್.ಸೀತಾರಾಂಗೆ ಕೊಡಲು ನಮ್ಮ‌ ವಿರೋಧವಿಲ್ಲ.

ಆದರೆ ಸುಧಾಂದಾಸ್ ಇತ್ತೀಚೆಗಷ್ಟೇ ಪಕ್ಷ ಸೇರಿದ್ದಾರೆ. ಅವರಿಂದ ಪಕ್ಷಕ್ಕೆ ಏನು ಲಾಭವಾಗಿದೆ. ದಲಿತ ಲೆಫ್ಟ್ ಗೆ ಕೊಡುವುದಾದರೆ ಕಾರ್ಯಕರ್ತರಿಗೆ ಕೊಡಿ. ಸಿ.ಎಂ.ಲಿಂಗಣ್ಣ ಒಕ್ಕಲಿಗ ಸಮುದಾಯದವರು. ಅವರ ಜಾಗಕ್ಕೆ ಒಕ್ಕಲಿಗ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಿ. ಇನ್ನು ಮೋಹನ್ ಕೊಂಡಜ್ಜಿ ಲಿಂಗಾಯತ ಸಮುದಾಯವರು. ಅವರ ಸ್ಥಾನವನ್ನ ಲಿಂಗಾಯತ ಸಮುದಾಯಕ್ಕೇ ನೀಡಿ ಎಂದು ಎಂದು ಸುರ್ಜೇವಾಲ, ವೇಣುಗೋಪಾಲ್ ಗೆ ಪತ್ರ ಬರೆಯಲಾಗಿದೆ.

ಪ್ರಸ್ತುತ ಸೀತಾರಾಂಗೆ ಕೊಡಲು ಯಾರ ವಿರೋಧವಿಲ್ಲ. ಆದರೆ ಉಳಿದ ಎರಡು ಸ್ಥಾನಕ್ಕೆ ಹಲವರು ಪೈಪೋಟಿಯಲ್ಲಿದ್ದಾರೆ. ಲಿಂಗಾಯತ ಸಮುದಾಯದಿಂದ ವಕ್ತಾರ ಅನಿಲ್ ಕುಮಾರ್ ಆಯ್ಕೆ ಬಯಸಿದ್ದು, ಒಕ್ಕಲಿಗ ಸಮುದಾಯದಿಂದ ನಾಲ್ವರು ಬೇಡಿಕೆ ಇಟ್ಟಿದ್ದಾರೆ. ರಘು ನಂದನ್ ರಾಮಣ್ಣ, ಪ್ರೊ.ರಾಜೀವ್ ಗೌಡ, ನಟರಾಜ್ ಗೌಡ, ಆರತಿ ಕೃಷ್ಣ ಆಯ್ಕೆಗೆ ಡಿಮ್ಯಾಂಡ್ ಇಟ್ಟಿದ್ದಾರೆ. ಹೀಗಾಗಿ ಕಾರ್ಯಕರ್ತರ ಪತ್ರ ವರಿಷ್ಠರಿಗೆ ಪೀಕಲಾಟ ತಂದಿಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net