ತೆಲಂಗಾಣದಲ್ಲೂ ವರ್ಕೌಟ್ ಆದ ಕರ್ನಾಟಕದ 'ಗ್ಯಾರಂಟಿಗಳು': 'ಕೈ' ಹಿಡಿದ ಮತದಾರ - ಕೆಸಿಆರ್​ಗೆ 'ಕೈ' ಕೊಟ್ಟ ಮುಸ್ಲಿಮರು!

telangana
Published on

ಹೈದರಾಬಾದ್​: ಕರ್ನಾಟಕದ ಗ್ಯಾರಂಟಿ ಸ್ಕೀಂಗಳು ಪಂಚರಾಜ್ಯ ಚುನಾವಣೆಯಲ್ಲಿ ವರ್ಕೌಟ್​ ಆಗಬಹುದೆಂದು ಭಾವಿಸಿದ್ದ ಕಾಂಗ್ರೆಸ್​ಗೆ ದಕ್ಷಿಣದ ತೆಲಂಗಾಣ ಹೊರತಾಗಿ ಉಳಿದ ಮೂರು ರಾಜ್ಯಗಳಲ್ಲಿ ಅಧಿಕಾರದ ಸನಿಹಕ್ಕೆ ಬರಲು ಸಾಧ್ಯವಾಗಿಲ್ಲ. ಇನ್ನೂ ಒಂದು ರಾಜ್ಯದ ಫಲಿತಾಂಶ ಬಾಕಿ ಇದೆ.

ತೆಲಂಗಾಣದಲ್ಲಿ ಕೆ.ಸಿ.ಚಂದ್ರಶೇಖರ ರಾವ್​ ತಂತ್ರಗಾರಿಕೆ ಕೈಕೊಟ್ಟಿದೆ. ಕಾಪು- ಕಮ್ಮ ಜಾತಿಗಳ ವಿಭಜನೆ ವರ್ಕೌಟ್​ ಆಗದೆ, ರೆಡ್ಡಿಗಳ ಪಾರ್ಟಿ ಕಾಂಗ್ರೆಸ್ ಎಂಬ ಆರೋಪದ ನಡುವೆಯೂ ಮುಖಂಡ ರೇವಂತ ರೆಡ್ಡಿ ಮತದಾರರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಚುನಾವಣೆ ಅಧಿಕಾರಸ್ಥರು - ಸಾಮಾನ್ಯ ಜನರ ನಡುವಿನ ಯುದ್ಧ ಎಂದೇ ಬಿಂಬಿಸಿದ್ದರು ರೇವಂತ್ ರೆಡ್ಡಿ. ಅಧಿಕಾರಕ್ಕೇರಿದ ಕೂಡಲೇ ಮಾಡುವ ಮೊದಲ ಕೆಲಸ ತೆಲುಗುಮಕ್ಕಳಿಗೆ ಪ್ರಗತಿ ಭವನದ ಬಾಗಿಲು ತೆರೆಯೋದು ಎಂದು ಘೋಷಿಸಿದ್ದರು. ಈ ಮೂಲಕ ಅಪ್ಪ-ಮಗ, ಮಗ-ಅಳಿಯ ಸೇರಿ ನಾಲ್ವರ ಕೈಯಲ್ಲಷ್ಟೇ ರಾಜ್ಯವಿದೆ ಅನ್ನೋ ಮನಸ್ಥಿತಿಯನ್ನ ವಸ್ತುಸ್ಥಿತಿಗೂ ಇಳಿಸೋವಲ್ಲಿ ಯಶಸ್ವಿಯಾದರು. ಪರಿಣಾಮ ಕಳೆದರಡು ಚುನಾವಣೆಗಳಲ್ಲಿ ತೆಲಂಗಾಣ ರಾಜ್ಯ ಉದಯಕ್ಕೆ ಕಾರಣರಾಗಿ ಅಧಿಕಾರದ ಚುಕ್ಕಾಣಿ ಹಿಡಿದು 10ವರ್ಷ ಅಧಿಕಾರ ಅನುಭವಿಸಿದ ಕೆ.ಚಂದ್ರಶೇಖರ ರಾವ್​ಗೆ ಕಾಂಗ್ರೆಸ್​ ಮಣ್ಣು ಮುಕ್ಕಿಸಿದೆ.

ಇನ್ನು ಕೆಸಿಆರ್ ತಮ್ಮ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್​) ಹೆಸರು ಬದಲಿಸಿ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್)​ ಎಂದು ಬದಲಿಸಿದರೂ ಅದು ಗೆಲುವಿಗೆ ನೆರವಾಗಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರಲು ತಂತ್ರಗಾರಿಕೆ ಹೆಣೆದಿದ್ದ ಸುನಿಲ್ ಕನ್ನುಗೋಲು ತಂತ್ರಗಾರಿಕೆ, 6 ಗ್ಯಾರಂಟಿಗಳ ಜೊತೆಯಾಟ, ಕರ್ನಾಟಕ ಸರ್ಕಾರದ ಶಕ್ತಿ-ಯುಕ್ತಿ ಎಲ್ಲವೂ ಕೂಡ ಒಂದು ತಂಡವಾಗಿ ಮತದಾರ ಕಾಂಗ್ರೆಸ್ ಕೈ ಹಿಡಿದಿದ್ದಾನೆ.

ಕರ್ನಾಟಕದಲ್ಲಿ ಜೆಡಿಎಸ್ ಗೆ ಕೈಕೊಟ್ಟು ಸರಸಾಗಾಟಾಗಿ ಮುಸ್ಲಿಂ ಮತದಾರರು ಕಾಂಗ್ರೆಸ್​ನತ್ತ ವಲಸೆ ಹೋಗಿದ್ದು ಕೆಸಿಆರ್​ಗೆ ದೊಡ್ಡ ಪೆಟ್ಟು ಕೊಟ್ಟಿತು. ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ಸಹೋದರಿ ಶರ್ಮಿಳಾ ಕಾಂಗ್ರೆಸ್​ ಬೆಂಬಲಿಸಿದ್ದು, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ತೆಲುಗು ದೇಶಂ ಸ್ಪರ್ಧೆ ಮಾಡದೆ ಹೋದದ್ದು, ಬಿಜೆಪಿ, ಬಿಆಆರ್​ಎಸ್ ನಾಯಕರನ್ನು ಪಕ್ಷಕ್ಕೆ ಸೆಳೆದಿದ್ದು ಕೂಡ ಕಾಂಗ್ರೆಸ್ ಗೆಲುವಿಗೆ ನೆರವಾಗಿದೆ.

ಇದೇ ಮೊದಲ ಬಾರಿಗೆ ಬಿಜೆಪಿ ಸಹ ಎರಡಂಕೆ ಸನಿಹಕ್ಕೆ ಬಂದಿದ್ದು, ಪಕ್ಷಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಆದರೆ ಒವೈಸಿ ಪಕ್ಷಕ್ಕೆ ಮತಹಾಕುವುದರಿಂದ ಮತ ವಿಭಜನೆಯಾಗುತ್ತದೆ ಎಂದು ಭಾವಿಸಿ ಮುಸ್ಲಿಮರು ಕಾಂಗ್ರೆಸ್​ ಕಡೆ ವಾಲಿರುವುದು, ಅದೇ ಸಮುದಾಯವನ್ನು ನಂಬಿಕೊಂಡಿದ್ದ ಆ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net