

ಬೆಂಗಳೂರು: ಯಾರನ್ನೋ ಓಲೈಸುವುದಕ್ಕಾಗಿ ಸರ್ಕಾರದ ಆಸ್ತಿಯನ್ನು ಲೂಟಿ ಹೊಡೆದಿರುವವರಿಗೆ ರಕ್ಷಣೆ ಕೊಡುವ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಬೆಲೆ ತೆತ್ತಬೇಕಾಗುತ್ತದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ಜ್ಞಾನಜ್ಯೋತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಉದ್ಯೋಗ ಮೇಳ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ರೈತರ ಜಮೀನುಗಳಿಗೆ ವಕ್ಫ್ ಬೋರ್ಡ್ ಬೇಲಿ ಹಾಕಿರುವ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಸಿದ ಅವರು, ರೈತರ ಭೂಮಿಯಾಗಲಿ, ಸರ್ಕಾರದ ಭೂಮಿಯಾಗಲಿ, ವಕ್ಫ್ ಹೆಸರಿನಲ್ಲಿ ಯಾರೋ ನಾಲ್ಕು ಜನ ಸಮಾಜಕ್ಕೆ ಸೇರಿದ್ದಾರೋ ಇಲ್ಲವೋ, ಭೂಗಳ್ಳರು ಸ್ವೇಚ್ಛಾಚಾರವಾಗಿ ಭೂಮಿಯನ್ನು ಲಪಟಾಸುತ್ತಿರುವುದರ ಬಗ್ಗೆ ಸತ್ಯಾಂಶ ಹೊರ ಬರಬೇಕು ಎಂದು ಆಗ್ರಹಿಸಿದರು.
ಇತ್ತೀಚೆಗೆ ಕೇಂದ್ರ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಕೂಡ ವಕ್ಫ್‌ಗೆ ಸಂಬಂಧಿಸಿದ ಕೆಲವು ಆಸ್ತಿಗಳು ಮತ್ತು ಕೆಲವು ನಿರ್ಧಾರಗಳ ಬಗ್ಗೆ ಸುಧೀರ್ಘ ಚರ್ಚೆಯಾಗಿದೆ. ಅದರ ಬಗ್ಗೆ ಪರಿಶೀಲನೆಯಾಗಬೇಕು ಎಂದು ಕೇಂದ್ರ ಸರ್ಕಾರದಲ್ಲಿಯೂ ತೀರ್ಮಾನಗಳಾಗಿವೆ. ಆದರೆ, ಕರ್ನಾಟಕದಲ್ಲಿ ಈ ರೀತಿಯ ವಾತಾವರಣದಿಂದ ರೈತರು ಭಯಭೀತರಾಗಿದ್ದಾರೆ ಎಂಬ ಆತಂಕ ವ್ಯಕ್ತಪಡಿಸಿದರು.