ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ದುರ್ಬಲ; ಲಾಕ್​ಡೌನ್​ನಲ್ಲಿ ಮಹತ್ವ ಅರಿತರು

State- cong2
Published on

ಬೆಂಗಳೂರು: ಸಾಮಾಜಿಕ ಜಾಲತಾಣ ಎಷ್ಟು ಮುಖ್ಯ ಎಂಬುದು ರಾಜಕಾರಣಿಗಳಿಗೆ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಅರಿವಿಗೆ ಬಂದಿದೆ. ತಮ್ಮ ಕ್ಷೇತ್ರದ ಜನರನ್ನು ತಲುಪಲು, ಮತದಾರರಿಗೆ ತಾವೇನು ಮಾಡಿದ್ದೇವೆ ಎಂದು ತಿಳಿಸಲು ಸಾಮಾಜಿಕ ಜಾಲತಾಣ ಅತಿ ಮುಖ್ಯ ಎಂಬುದು ಗೊತ್ತಾಗಿದೆ.

ರಾಜಕಾರಣಿಗಳು ಸಾಮಾಜಿಕ ಜಾಲತಾಣದಲ್ಲಿ ಎಷ್ಟು ಕ್ರಿಯಾಶೀಲವಾಗಿದ್ದಾರೆ ಎಂಬುದನ್ನು ಅಳೆಯುವ ಪರಿಸ್ಥಿತಿಯೂ ನಿರ್ವಣವಾಗಿದೆ. ಕಾಂಗ್ರೆಸ್ ಕೂಡ ಈ ಬಗ್ಗೆ ಅವಲೋಕನ ನಡೆಸಿದ್ದು, ತನ್ನ ಎಷ್ಟು ಶಾಸಕರು ಸರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ಗಮನಿಸಿದ್ದು, ಶೇ.70 ಶಾಸಕರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದು ಅರಿತುಕೊಂಡಿದೆ. ಜತೆಗೆ ಕೊರತೆಗಳನ್ನು ನೀಗಿಸಿಕೊಳ್ಳಲು ತೀರ್ವನಿಸಿದೆ.

ತನ್ನ 68 ಶಾಸಕರ ಪೈಕಿ 21 ಶಾಸಕರಷ್ಟೇ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಖಚಿತ ಮಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಹಿಂದೆ ಬಿದ್ದ ಶಾಸಕರ ನೆರವಿಗೆ ಬರಲು ಸಾಮಾಜಿಕ ಜಾಲತಾಣ ತಂಡದಿಂದ ಪ್ರತ್ಯೇಕ ನೆರವು ಕೊಡಲು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಪಕ್ಷದ ಸಾಮಾಜಿಕ ಜಾಲತಾಣ ತಂಡ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಹಾಗೂ ಜನಾಭಿಪ್ರಾಯ ರೂಪಿಸುವುದು, ಪಕ್ಷದ ವಿಷಯವನ್ನು ಜನರಿಗೆ ಮುಟ್ಟಿಸುವಲ್ಲಿ ಒಂದಷ್ಟು ಪರಿಣಾಮಕಾರಿ ಕೆಲಸ ಮಾಡುತ್ತಿದೆ. ಆದರೂ ಶಾಸಕರು ತಮ್ಮ ಚಟುವಟಿಕೆಯನ್ನು ಜನರಿಗೆ ತಿಳಿಸುವಲ್ಲಿ ಮತ್ತು ಜನರ ಸಂಪರ್ಕಕ್ಕೆ ಬಾರದೆ ಹಿಂದೆ ಬಿದ್ದರೆ ಚುನಾವಣೆಯಲ್ಲಿ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದು ಪಕ್ಷದ ಲೆಕ್ಕಾಚಾರ. ಬಿಜೆಪಿಯಲ್ಲಿ ಈ ವರ್ಗಕ್ಕೆ ಸೇರಿದ ಶಾಸಕರ ಸಂಖ್ಯೆ ಕಡಿಮೆ ಇದೆ ಎಂದು ಕೈ ನಾಯಕರು ಅಂದಾಜಿಸಿದ್ದಾರೆ.

ಬೆಂಗಳೂರಿನ ಬಹುತೇಕ ಕೈ ಶಾಸಕರು ಕ್ರಿಯಾಶೀಲವಾಗಿದ್ದರೆ, ಉತ್ತರ ಕರ್ನಾಟಕ ಹಾಗೂ ಗ್ರಾಮೀಣ ಭಾಗದ ಶಾಸಕರು ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಆಸಕ್ತಿ ತೋರಿಸಿಲ್ಲ ಎಂಬುದು ಗೊತ್ತಾಗಿದೆ. ಕ್ಷೇತ್ರದಲ್ಲಿ ಮಾಡಿದ ಚಟುವಟಿಕೆಯನ್ನು ನಿರಂತರವಾಗಿ ಪೋಸ್ಟ್ ಮಾಡುವುದು, ಸಭೆ, ಸಮಾರಂಭ, ಪ್ರಗತಿಪರಿಶೀಲನೆ ವಿಡಿಯೋಗಳನ್ನು ಪೋಸ್ಟ್ ಮಾಡುವುದು, ಲೈವ್ ಬರುವ ಮೂಲಕ ಜನರ ಪ್ರಶ್ನೆಗಳಿಗೆ ಉತ್ತರಿಸುವ ಕೆಲಸ ಆಗಬೇಕೆಂದು ಪಕ್ಷ ಬಯಸಿದೆ.

ಮುಂಚೂಣಿಯಲ್ಲಿ ಕೆಲವೇ ಕೆಲವರು: ಕೆೆಪಿಸಿಸಿ ಮಾಹಿತಿ ಪ್ರಕಾರವೇ ಸಿದ್ದರಾಮಯ್ಯ, ಕೃಷ್ಣಬೈರೇಗೌಡ, ಸೌಮ್ಯಾ ರೆಡ್ಡಿ, ದಿನೇಶ್ ಗುಂಡೂರಾವ್ ಸೇರಿ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಮುಂಚೂಣಿಯಲ್ಲಿ ಇರುವವರಾಗಿದ್ದಾರೆ. ಬಿಜೆಪಿ ಪೈಕಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ಅವರು ಬೆಳಗ್ಗೆ 5.30ರಿಂದಲೇ ಜಾಲತಾಣದಲ್ಲಿ ಕ್ರಿಯಾಶೀಲರಾಗಿರುತ್ತಾರೆ. ಉಳಿದಂತೆ ಕಾರ್ಕಳ ಶಾಸಕ ಸುನೀಲ್ ಕುಮಾರ್, ಸೊರಬ ಶಾಸಕ ಕುಮಾರ್ ಬಂಗಾರಪ್ಪ, ಸುರಪುರ ಶಾಸಕ ರಾಜೂಗೌಡ, ಡಾ.ಕೆ.ಸುಧಾಕರ್ ಹಾಗೂ ಡಾ.ಅಶ್ವತ್ಥನಾರಾಯಣ ಹೆಚ್ಚು ಸಕ್ರಿಯರಾಗಿರುವುದು ಕಂಡುಬರುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net