ಕೇಂದ್ರ ಸರ್ಕಾರ ಕರ್ನಾಟಕ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹವಣಿಕೆ; ವಿಜಯೇಂದ್ರ

B Y Vijayendra 2
Published on

ಬೆಂಗಳೂರು: ಒಂದಿಲ್ಲೊಂದು ನೆಪವೊಡ್ಡಿ ಕೇಂದ್ರ ಸರ್ಕಾರದ ಮೇಲೆ ಆರೋಪ ಹೊರಿಸುವುದು ಕಾಂಗ್ರೆಸ್ ಸರ್ಕಾರ, ಸಿಎಂ ಸಿದ್ದರಾಮಯ್ಯ ಕೆಲಸವಾಗಿ ಬಿಟ್ಟಿದೆ. ಈಗ ಸ್ತಬ್ಧಚಿತ್ರ ವಿಚಾರದಲ್ಲೂ ಕೇಂದ್ರ ಸರ್ಕಾರ ಕರ್ನಾಟಕ ವಿರೋಧಿ ಎಂದು ಬಿಂಬಿಸಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಗಣರಾಜ್ಯೋತ್ಸವ ಪರೇಡ್ ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳಿಗೆ ಕಳೆದ 14 ವರ್ಷಗಳಿಂದಲೂ ನಿರಂತರವಾಗಿ ಅವಕಾಶ ಸಿಕ್ಕಿದೆ. ಬೇರೆ ರಾಜ್ಯಗಳಿಗೆ ಅವಕಾಶ ಕೊಡುವ ಉದ್ದೇಶದಿಂದ ಈ ಬಾರಿ ಕರ್ನಾಟಕ, ಗೋವಾ ಸೇರಿ ನಾಲ್ಕೈದು ರಾಜ್ಯಗಳಿಗೆ ಅವಕಾಶ ನೀಡಿಲ್ಲವೆಂಬ ಮಾಹಿತಿಯಿದೆ.

ಪರೇಡ್ ನಲ್ಲಿ ಇಲ್ಲದಿದ್ದರೂ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ರಾಜ್ಯದ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡಲಾಗಿದೆ. ಯಾವುದೇ ರಾಜ್ಯಗಳಿಗೆ ತಾರತಮ್ಯವಾಗದಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕಳೆದ ಬಾರಿ ಮುಂಚಿತವಾಗಿ ಈ ವಿಷಯ ತಿಳಿದಿದ್ದರಿಂದ ರಾಜ್ಯದ ನಾಯಕರು ಪ್ರಯತ್ನಿಸಿ‌ ಅವಕಾಶ ಕೊಡಿಸಿದ್ದರು. ಈ ಬಾರಿ ಕಾಲಾವಕಾಶ, ಸಂದರ್ಭವನ್ನೂ ಅವಲೋಕಿಸಬೇಕಾಗುತ್ತದೆ ಎಂದರು.

ಮೊಸಳೆ ಕಣ್ಣೀರು

ನಾಡು ನುಡಿ, ನೆಲ ಜಲದ ವಿಚಾರದಲ್ಲಿ ಕರ್ನಾಟಕದ ಬಗ್ಗೆ ಕಾಂಗ್ರೆಸ್ ಸರ್ಕಾರ ಮೊಸಳೆ ಕಣ್ಣೀರು ಸುರಿಸುತ್ತಿದೆ. ಕಳೆದ ಆರು ತಿಂಗಳಿಂದಲೂ ತಮಿಳುನಾಡಿಗೆ ಕಾವೇರಿ ನೀರು ಹರಿದು ಹೋಗುತ್ತಿದ್ದು, ಈ ಬಗ್ಗೆ ದೃಢ ನಿಲುವು ತಳೆಯಲು ಸಾಧ್ಯವಾಗಿಲ್ಲ ಎಂದು ತಿರುಗೇಟು ನೀಡಿದರು‌.

ನಾಡು ನುಡಿಗೆ ಹೋರಾಟ ಮಾಡುತ್ತಿರುವ ಕರವೇ ಅಧ್ಯಕ್ಷ ನಾರಾಯಣಗೌಡ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಹೇಗೆ ನಡೆದುಕೊಳ್ಳುತ್ತಿದೆ ಎಂದು ರಾಜ್ಯದ ಜನರು ಗಮನಿಸುತ್ತಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರದಲ್ಲಿತ್ತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ತಮ್ಮ ಸ್ಪಷ್ಟ ಅಭಿಪ್ರಾಯ ತಿಳಿಸಲಿ ಎಂದು ಬಿ.ವೈ.ವಿಜಯೇಂದ್ರ ಆಗ್ರಹಿಸಿದರು.

ಮುತ್ಸದ್ದಿತನ ಮರೆ

ಪಕ್ಷದ ಮಾಜಿ ಸಚಿವ ಸಿ‌.ಟಿ.ರವಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮುತ್ಸದ್ದಿತನ ಮರೆಯಾಗಿದೆ. ದಿನ ಬೆಳಗಾದರೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಕೆಲಸವಾಗಿಬಿಟ್ಟಿದೆ. ಪರಿಹಾರ, ತೆರಿಗೆ‌ ಹಂಚಿಕೆ, ಸ್ತಬ್ಧಚಿತ್ರ ಹೀಗೆ ಪ್ರತಿಯೊಂದು ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಆರೋಪ ಹೊರಿಸುತ್ತಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತದಲ್ಲಿ 2004 ರಿಂದ 2014ರವರೆಗೆ‌ ರಾಜ್ಯಕ್ಕೆ ಎಷ್ಟು ಹಂಚಿಕೆಯಾಗಿತ್ತು ಎಂಬ ಅಂಕಿ- ಅಂಶಗಳನ್ನು ಜನರ ಮುಂದಿಡಲಿ ಎಂದು ಸಿ.ಟಿ.ರವಿ ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net