

Bihar Election: ಬಿಹಾರ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದು, ಆಡಳಿತರೂಢ ಎನ್ಡಿಎ ಮೈತ್ರಿಕೂಟದ ಸೀಟು ಹಂಚಿಕೆ ನಿನ್ನೆ ಬಹಿರಂಗಗೊಂಡಿದೆ.ಇತ್ತ ಮಹಾಘಟಬಂಧನ್ ಮಿತ್ರಪಕ್ಷವಾಗಿರುವ ಕಾಂಗ್ರೆಸ್ ಸುಮಾರು 60 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಜನತಾ ದಳ ಜೊತೆಗಿನ ಸೀಟು ಹಂಚಿಕೆ ಮಾತುಕತೆ ಹೆಚ್ಚು ಕಡಿಮೆ ಅಂತಿಮಗೊಂಡಿದ್ದು, ಎರಡು, ಮೂರು ಕ್ಷೇತ್ರಗಳು ಕುರಿತಾಗಿ ಚರ್ಚೆ ಮುಂದುವರೆದಿದೆ, ಅಂತಿಮವಾಗಿ ನಾಳೆ ಟಿಕೆಟ್ ಹಂಚಿಕೆ ಸುದ್ದಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಮತ್ತು ಆರ್‌ಜೆಡಿ ನಡುವೆ ಸೀಟು ಹಂಚಿಕೆ ಕುರಿತಾಗಿ ಯಾವುದೇ ಅಸಮಧಾನವಿಲ್ಲ, ಎರಡೂ ಪಕ್ಷಗಳು ಹಕ್ಕು ಮಂಡಿಸಿರುವ ಕೆಲವು ಸ್ಥಾನಗಳನ್ನು ಹೊರತುಪಡಿಸಿ, ಬಹುತೇಕ ಎಲ್ಲಾ ಸ್ಥಾನಗಳ ಇತ್ಯರ್ಥವಾಗಿದೆ ಎಂದು ಕಾಂಗ್ರೆಸ್ ಮೂಲಗಳು ಇಂಡಿಯಾ ಟುಡೇಗೆ ತಿಳಿಸಿವೆ. ಎರಡು ಪ್ರಮುಖ ಮೈತ್ರಿಕೂಟದ ಪಾಲುದಾರರ ನಡುವೆ ದಿನಗಟ್ಟಲೆ ನಡೆದ ಉದ್ವಿಗ್ನ ಮಾತುಕತೆಗಳ ನಂತರ ಈ ಬೆಳವಣಿಗೆ ಒಂದು ಮಹತ್ವದ ತಿರುವು ಸಿಕ್ಕಿದ್ದು, ಆರ್‌ಜೆಡಿ ಆರಂಭದಲ್ಲಿ ಕಾಂಗ್ರೆಸ್‌ಗೆ 52 ಸ್ಥಾನಗಳನ್ನು ನೀಡುವುದಾಗಿ ಭರವಸೆ ನೀಡಿತ್ತು, ಆದರೆ ಕೈ ಪಾಳಯ 60 ಸ್ಥಾನಗಳ ತನ್ನ ಪಟ್ಟು ಸಡಿಲಿಸದ ಕಾರಣ ಆರ್‌ಜೆಡಿ ಅದಕ್ಕೆ ಒಪ್ಪಿಗೆ ನೀಡಿದ್ದು, ಸದ್ಯ ಬಿಕ್ಕಟ್ಟು ಕಡಿಮೆಯಾದಂತೆ ಕಾಣುತ್ತಿದೆ.
ಈ ವಿಷಯವಾಗಿ ಮೊದಲೇ ಮಾತನಾಡಿದ್ದ ಕಾಂಗ್ರೆಸ್ ನಾಯಕ ಪವನ್ ಖೇರಾ, ಬಿಜೆಪಿ ನಿರೀಕ್ಷಿಸಿದಂತೆ ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆ ಕುರಿತಾಗಿ ಯಾವುದೇ ಅಡಚಣೆ ಇಲ್ಲ. ಪ್ರತಿಯೊಂದು ಪಕ್ಷಕ್ಕೂ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಹಕ್ಕಿದೆ. ನಾವು ಒಟ್ಟಾಗಿ ಚುನಾವಣೆಯಲ್ಲಿ ಹೋರಾಡುತ್ತೇವೆ ಎಂದು ಹೇಳಿದರು.
ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆಗೆ, ಮಹಾಘಟಬಂಧನ್‌ನಲ್ಲಿ ಜಾರ್ಖಂಡ್ನ ಆಡಳಿತರೂಢ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಎಡ ಪಕ್ಷಗಳು ಸಹ ಸೇರಿವೆ. ಜೆಎಂಎಂ ಕನಿಷ್ಠ 12 ಸ್ಥಾನಗಳನ್ನು ಬಯಸಿದ್ದರೆ, ಸಿಪಿಐ ಈಗಾಗಲೇ 24 ಅಭ್ಯರ್ಥಿಗಳ ಪಟ್ಟಿಯನ್ನು ತೇಜಸ್ವಿ ಯಾದವ್ ಅವರಿಗೆ ಸಲ್ಲಿಸಿದೆ ಎಂದು ಮೂಲಗಳ ಮಾಹಿತಿ. ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಮಿತ್ರಪಕ್ಷ ಆರ್‌ಜೆಡಿ 75 ಸ್ಥಾನಗಳೊಂದಿಗೆ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್)