

Gaza meet: ಈಜಿಪ್ಟ್‌ನಲ್ಲಿ ನಡೆಯಲಿರುವ ಗಾಜಾ ಶಾಂತಿ ಶೃಂಗಸಭೆಗೆ ರಾಜ್ಯ ಸಚಿವರನ್ನು ಕಳುಹಿಸುವ ಸರ್ಕಾರದ ನಿರ್ಧಾರವನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಸೋಮವಾರ (ಅ 13) ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಗೈರು ಹಾಜರಿ ನಿರ್ಣಾಯಕ ಮಾತುಕತೆಗಳಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡಬಹುದೇ ಎಂದು ಅಭಿಪ್ರಾಯಪಟ್ಟಿರುವ ತರೂರ್, ಈ ಸಭೆಯಲ್ಲಿ ಭಾರತದ ಪ್ರಾತಿನಿಧ್ಯವು ಅಲ್ಲಿ ಸೇರಲಿರುವ ಎಲ್ಲ ರಾಷ್ಟ್ರಗಳ ಮುಖ್ಯಸ್ಥರಿಗಿಂತ ಭಿನ್ನವಾಗಿದ್ದು, ಇಲ್ಲಿ ಸಚಿವ ಕೀರ್ತಿ ವರ್ಧನ್ ಸಿಂಗ್ ಸಾಮರ್ಥ್ಯದ ಬಗ್ಗೆ ಯಾವುದೇ ಆಕ್ಷೇಪವಿಲ್ಲ, ಆದರೆ, ಪ್ರಧಾನಿ ಭಾಗವಹಿಸುವಿಕೆ ಬೇರೆಯದ್ದೆ ರೀತಿಯ ಸಂದೇಶವನ್ನು ನೀಡುತಿತ್ತು ಎಂದರು.
ಪ್ರಧಾನಿ ಮೋದಿಯ ಈ ನಿರ್ಧಾರ ಬೇರೆಯದ್ದೆ ಆದ ಪರಿಣಾಮಗಳನ್ನು ಬೀರಬಹುದು, ಕೇವಲ ಶಿಷ್ಟಾಚಾರದ ಪ್ರವೇಶದ ಕಾರಣಗಳಿಂದ, ಪುನರ್ನಿರ್ಮಾಣ ಮತ್ತು ಪ್ರಾದೇಶಿಕ ಸ್ಥಿರತೆಯ ವಿಷಯಗಳ ಕುರಿತು ಶೃಂಗಸಭೆಯಲ್ಲಿ ಭಾರತದ ಧ್ವನಿಯು ಕಡಿಮೆ ತೂಕವನ್ನು ಹೊಂದಬಹುದು, ತನ್ನನ್ನು ತಾನು ಪುನರ್ರೂಪಿಸಿಕೊಳ್ಳುತ್ತಿರುವ ಪ್ರದೇಶದಲ್ಲಿ, ನಮ್ಮ ನಾಯಕರ ಅನುಪಸ್ಥಿತಿಯು ಗೊಂದಲಮಯವಾಗಿದೆ ಎಂದು ಹೇಳಿದರು. ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, ಶರ್ಮ್ ಎಲ್ ಶೇಖ್‌ನಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್ ಸಿಸಿ ಸಹ-ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ 20 ಕ್ಕೂ ಹೆಚ್ಚು ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದು, ಗಾಜಾ ಶಾಂತಿ ಒಪ್ಪಂದ ಮತ್ತು ಯುದ್ಧಾನಂತರದ ಪುನರ್ನಿರ್ಮಾಣದ ಚೌಕಟ್ಟಿನ ಕುರಿತು ಚರ್ಚಿಸಿದ್ದಾರೆ.
ಸರ್ಕಾರವು ಈ ವಿಷಯದ ಕುರಿತು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡದಿದ್ದರೂ, ಪಾಕಿಸ್ತಾನದೊಂದಿಗಿನ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲಿ ಈ ಬೆಳವಣಿಗೆಗಳು ನಡೆದಿವೆ. ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಆಪರೇಷನ್ ಸಿಂಧೂರ ರೂಪದಲ್ಲಿ ತಿರುಗೇಟು ನೀಡಿತು. ಶೃಂಗಸಭೆಯಲ್ಲಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಉಪಸ್ಥಿತಿಯ ಕಾರಣದಿಂದ ಮೋದಿ ಸಭೆಯಿಂದ ದೂರ ಉಳಿದಿದ್ದಾರೆ ಎನ್ನುವ ಚರ್ಚೆಗಳು ಕೂಡ ನಡೆಯುತ್ತಿವೆ.
ಶೃಂಗಸಭೆಯ ಸಹ ಅಧ್ಯಕ್ಷರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಪಸ್ಥಿತಿಯು ಗೈರಿಗೆ ಇನ್ನೊಂದು ಕಾರಣ ಎನ್ನಲಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮದ ಮಧ್ಯಸ್ಥಿಕೆ ವಹಿಸಿದ್ದೇನೆ ಎಂಬ ತಮ್ಮ ಹೇಳಿಕೆಯನ್ನು ಮತ್ತೆ ಅಲ್ಲಿ ಪುನರುಚ್ಛರಿಸಬಹುದು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಹೇಳಿಕೆಗಳನ್ನು ಭಾರತ ನಿರಂತರವಾಗಿ ನಿರಾಕರಿಸುತ್ತಾ ಬಂದಿದೆ. ಇತ್ತಿಚೆಗೆ ಇಸ್ರೇಲ್ ಸಂಸತ್ತಿನಲ್ಲಿ ಮಾಡಿದ ಭಾಷಣದ ಸಂದರ್ಭದಲ್ಲಿ ಟ್ರಂಪ್ ಈ ಹೇಳಿಕೆಯನ್ನು ಪುನರಾವರ್ತಿಸಿದ್ದರು ಎಂದು ವರದಿಯಾಗಿದೆ.
ಅಕ್ಟೋಬರ್ 9 ರಂದು, ಪ್ರಧಾನಿ ಮೋದಿ, ಟ್ರಂಪ್ ಅವರಿಗೆ ಕರೆ ಮಾಡಿ, ಶಾಂತಿ ಯೋಜನೆಯ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದರು ಮತ್ತು ದ್ವಿಪಕ್ಷೀಯ ವ್ಯಾಪಾರ ಮಾತುಕತೆಗಳಲ್ಲಿನ ಪ್ರಗತಿಯನ್ನು ಪರಿಶೀಲಿಸಿದರು.(ಏಜೆನ್ಸೀಸ್)