

ಕೋಲಾರ: ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿಗರ ವಿರೋಧದ ನಡುವೆಯೂ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್ ಸಫಲರಾಗಿದ್ದಾರೆ.
ಅನಿಲ್ ಕುಮಾರ್ ಶಾಸಕ ಕೆ.ಆರ್.ರಮೇಶ್‌ಕುಮಾರ್ ಸೇರಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ತಮ್ಮ ವಿರೋಧಿಗಳೊಂದಿಗೆ ಗುರುತಿಸಿಕೊಂಡಿದ್ದಾರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂಬ ಕಾರಣಕ್ಕೆ ಕೆ.ಎಚ್.ಮುನಿಯಪ್ಪ ಆ್ಯಂಡ್ ಟೀಮ್ ಟಿಕೆಟ್ ನೀಡದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿಯ ಕೆಲವು ಮುಖಂಡರ ಮೇಲೆ ಒತ್ತಡ ಹೇರಿದ್ದರು.
2015ರಲ್ಲಿ ನಡೆದ ಚುನಾವಣೆಯಲ್ಲಿ ಅನಿಲ್ ಕುಮಾರ್ ಸ್ಪರ್ಧಿಸಿದ್ದಾಗ ಮುನಿಯಪ್ಪ ಬೆಂಬಲ ನೀಡಿದ್ದರು. ಆಗ ಕೆಲ ಕಾಂಗ್ರೆಸ್ ಮುಖಂಡರು ಮುನಿಯಪ್ಪ ಮೇಲುಗೈ ಸಾಧಿಸಬಾರದೆಂದು ಅನಿಲ್ ಕುಮಾರ್ ಸೋಲಿಗೆ ಚಕ್ರವ್ಯೆಹ ರಚಿಸಿ, ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಸಿ.ಆರ್.ಮನೋಹರ್ ಗೆಲುವಿಗೆ ದಾರಿ ಮಾಡಿಕೊಟ್ಟಿದ್ದರು.
ಮುನಿಯಪ್ಪ ಅವರಿಗಾಗಿ ನಾಲ್ಕು ಬಾರಿ ಹಗಲಿರುಳು ಕೆಲಸ ಮಾಡಿ, ಪಕ್ಷ ಸಂಘಟನೆಗೂ ಶ್ರಮಿಸಿದ್ದ ಅನಿಲ್ ಕುಮಾರ್ ಬದಲಾದ ರಾಜಕೀಯ ಹಿನ್ನೆಲೆಯಲ್ಲಿ ಕಳೆದ 4 ವರ್ಷಗಳಿಂದ ಮುನಿಯಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವುದರಿಂದ ಟಿಕೆಟ್ ತಪ್ಪಿಸಲು ಕೆಎಚ್‌ಎಂ ದೆಹಲಿಗೆ ಹೋಗಿ ಹೈಕಮಾಂಡ್ ಮೇಲೆ ಒತ್ತಡ ಹೇರಿದ್ದರಾದರೂ ಎರಡೂ ಜಿಲ್ಲೆಯ ಕಾಂಗ್ರೆಸ್ ಶಾಸಕರ ಒತ್ತಡಕ್ಕೆ ಮಣಿದು ಟಿಕೆಟ್ ನೀಡಿರುವುದರಿಂದ ಮುನಿಯಪ್ಪ ಮತ್ತವರ ಬೆಂಬಲಿಗರಿಗೆ ಹಿನ್ನಡೆಯಾಗಿದೆ.
ಈ ಬೆಳವಣಿಗೆ ಮುಂದೆ ಯಾವ ತಿರುವು ಪಡೆಯುತ್ತದೋ ಕಾದು ನೋಡಬೇಕು. ಮುನಿಯಪ್ಪ ಮತ್ತವರ ಬೆಂಬಲಿಗರು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಇಲ್ಲವೇ ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜಿ ಶಾಸಕ ದಿವಂಗತ ವೆಂಕಟಗಿರಿಯಪ್ಪ ಅವರ ಅಳಿಯ, ಹಿರಿಯ ವಕೀಲ ಮಾಲೂರಿನ ಸೋಮಶೇಖರ್ ಪೈಕಿ ಒಬ್ಬರಿಗೆ ಟಿಕೆಟ್ ನೀಡಲು ಮನವಿ ಮಾಡಿಕೊಂಡಿದ್ದರು. ಅಂತಿಮವಾಗಿ ಹೈಕಮಾಂಡ್ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಪಕ್ಷದ ಶಾಸಕರ ಒತ್ತಡಕ್ಕೆ ಮಣಿದು ಅನಿಲ್ ಕುಮಾರ್‌ಗೆ ಟಿಕೆಟ್ ನೀಡಿದೆ.
ಭಾನುವಾರ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಅವರ ಮಗಳ ಮದುವೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ಮಂಜುನಾಥ್ ಜತೆ ಚರ್ಚಿಸಿ ಅನಿಲ್ ಕುಮಾರ್‌ಗೆ ಟಿಕೆಟ್ ನೀಡಲಾಗುತ್ತಿದ್ದು ಗೆಲ್ಲಿಸುವ ಜವಾಬ್ದಾರಿ ನಿನ್ನದು ಎಂದು ತಾಕೀತು ಮಾಡಿದ್ದರು.
ಇದಾದ ಬಳಿಕವೇ ಅನಿಲ್ ಕುಮಾರ್‌ಗೆ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿತ್ತು. ಅನಿಲ್ ಕುಮಾರ್ ಪರ ಶಾಸಕರಲ್ಲದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸಹ ಲಾಬಿ ಮಾಡಿದ್ದರು.
ಅನಿಲ್ ಕುಮಾರ್ ಈ ಹಿಂದೆ ಸೋತಿದ್ದಾರೆ, ಹೈಕಮಾಂಡ್ ಸೋತವರಿಗೇ ಮತ್ತೊಂದು ಅವಕಾಶ ನೀಡುವ ಮೂಲಕ ಉದಾರತನ ತೋರಿದೆ. ನಮ್ಮ ಪಕ್ಷದ ಎಲ್ಲ ಶಾಸಕರು ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗಿದ್ದೇವೆ, ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗೆ ದ್ರೋಹ ಬಗೆದಲ್ಲಿ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುವುದು ಗ್ಯಾರಂಟಿ. ಕೆ.ವೈ.ನಂಜೇಗೌಡ, ಶಾಸಕ, ಮಾಲೂರು ಅನಿಲ್ ಕುಮಾರ್ ಸಮರ್ಥ ಅಭ್ಯರ್ಥಿ, ಕಳೆದ ಬಾರಿ ಸೋತಿರುವುದರಿಂದ ಅನುಕಂಪ ಇದೆ. ಎರಡೂ ಜಿಲ್ಲೆಯ ಶಾಸಕರು ಒಗ್ಗಟ್ಟಿನಿಂದ ಕೆಲಸ ಮಾಡುವುದರಿಂದ ಗೆಲುವು ಸುಲಭವಾಗಲಿದೆ. ಟಿಕೆಟ್‌ಗಾಗಿ ನಾನು ಪ್ರಯತ್ನಿಸಿದ್ದು ನಿಜ, ಅನೇಕರು ಆಕಾಂಕ್ಷಿಗಳಿದ್ದರು. ಅನಿಲ್ ಕುಮಾರ್‌ಗೆ ಟಿಕೆಟ್ ನೀಡಬೇಕೆಂಬ ಅನೇಕರ ಆಸೆಗೆ ಫಲ ಸಿಕ್ಕಿದೆ. ಬ್ಯಾಲಹಳ್ಳಿ ಗೋವಿಂದಗೌಡ, ಅಧ್ಯಕ್ಷ, ಡಿಸಿಸಿ ಬ್ಯಾಂಕ್, ಕೋಲಾರ