ಪ್ರಧಾನಿ ಮೋದಿ ಭೇಟಿಗೆ ಕಾಂಗ್ರೆಸ್ ಕಟು ಟೀಕೆ

Mallikarjun Kharge 24
Published on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಕೇವಲ 5 ಗಂಟೆಗಳ ಅವಧಿಗೆ ಭೇಟಿ ನೀಡಿದ್ದಾರೆ. ಇದು ಪಿಟ್ ಸ್ಟಾಪ್ ಭೇಟಿ ಇದ್ದಂತೆ ಎಂದು ಕಾಂಗ್ರೆಸ್ ಟೀಕೆ ಮಾಡಿದೆ. ‘ನರೇಂದ್ರ ಮೋದಿ ಜೀ ಮಣಿಪುರದಲ್ಲಿ ನಿಮ್ಮ ಮೂರು ಗಂಟೆಗಳ ಪಿಟ್ ಸ್ಟಾಪ್ ಒಂದು ಪ್ರಹಸನ, ಹಿಂಸಾಚಾರದಿಂದ ಘಾಸಿಗೊಂಡವರಿಗೆ ಮಾಡಿದ ಗಂಭೀರ ಅವಮಾನ. ಇಂಫಾಲ ಮತ್ತು ಚುರಾಚಂದ್​ಪುರದಲ್ಲಿ ಇಂದು ನೀವು ನಡೆಸುತ್ತಿರುವ ರೋಡ್ ಶೋ ಶಿಬಿರಗಳಲ್ಲಿ ಜನರ ಕೂಗು ಕೇಳದೆ ಹೇಡಿತನದಿಂದ ತಪ್ಪಿಸಿಕೊಳ್ಳುತ್ತಿರುವ ಪ್ರಯತ್ನವಾಗಿದೆ. 865 ದಿನಗಳ ಹಿಂಸಾಚಾರದಲ್ಲಿ 300 ಜನರು ಮೃತಪಟ್ಟಿದ್ದಾರೆ. 67 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ನೀವು ಇಲ್ಲಿ ಹಿಂಸಾಚಾರ ಆರಂಭವಾದಾಗಿನಿಂದ 46 ವಿದೇಶಿ ಪ್ರವಾಸ ಮಾಡಿದ್ದೀರಿ, ಆದರೆ ಮಣಿಪುರದ ಜನರೊಂದಿಗೆ ಮಾತುಕತೆ ನಡೆಸಲು ಒಂದು ಭೇಟಿ ನೀಡಲು ಆಗಿರಲಿಲ್ಲ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ಮಣಿಪುರದ ಜನರು ಪ್ರಧಾನಿ ತಮ್ಮ ರಾಜ್ಯಕ್ಕೆ ಭೇಟಿ ನೀಡಲಿ ಎಂದು ತಾಳ್ಮೆಯಿಂದ ಕಾಯುತ್ತಿದ್ದರು. ಇಂದು ಅವರು ಮಣಿಪುರಕ್ಕೆ ಬಂದಿದ್ದಾರೆ. ಆದರೆ ಮಣಿಪುರದಲ್ಲಿ ಲ್ಯಾಂಡ್ ಆಗುವುದರಿಂದ ಟೇಕ್​ಆಫ್ ಆಗುವವರೆಗೆ 5 ಗಂಟೆಗಳಿಗಿಂತ ಕಡಿಮೆ ಸಮಯ ಇದ್ದರು. ಮೋದಿ ಪ್ರಚಾರ ಮಾಡಲು ಮತ್ತು ವಿಶ್ವದಾದ್ಯಂತ ಪ್ರಯಾಣಿಸಲು ಸಮಯ ಮತ್ತು ಒಲವು ಹೊಂದಿದ್ದಾರೆ. ಆದರೆ ಮಣಿಪುರಕ್ಕೆ ಆಗಮಿಸಲು ಅವರಿಗೆ ಸಮಯವಿರಲಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ತಿಳಿಸಿದ್ದಾರೆ. ಮೊದಲೇ ಯೋಚಿಸಬೇಕಿತ್ತು: ಮೋದಿ ಎರಡು ವರ್ಷಗಳ ಬಳಿಕ ಮಣಿಪುರಕ್ಕೆ ಭೇಟಿ ನೀಡಿರುವುದು ನಮಗೆ ಸಂತೋಷ ತಂದಿದೆ. ಆದರೆ ಅಲ್ಲಿಗೆ ಭೇಟಿ ನೀಡುವ ಕುರಿತು ಅವರು ಮೊದಲೇ ಯೋಚಿಸಬೇಕಿತ್ತು. ಮಣಿಪುರದಲ್ಲಿ ಇಷ್ಟು ದಿನ ಹಿಂಸಾಚಾರ ನಡೆಯಲು ಅವಕಾಶ ಮಾಡಿಕೊಟ್ಟಿರುವುದು ದುರದೃಷ್ಟಕರ ಎಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net