

ಬೆಂಗಳೂರು: ಭ್ರಷ್ಟಾಚಾರದ ಸರಣಿ, ಗುತ್ತಿಗೆದಾರರ ಸಂಘದ 60 ಪರ್ಸೆಂಟ್ ಕಮಿಷನ್ ಆರೋಪ, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಇತ್ಯಾದಿ ಆಂತರಿಕ ಸಮಸ್ಯೆಗಳನ್ನು ಕಾಂಗ್ರೆಸ್ ಎದುರಿಸುತ್ತಿದ್ದು, ವಿಷಯಾಂತರಕ್ಕೆ ಜಾತಿ ಜನಗಣತಿ ವರದಿ ಮುನ್ನೆಲೆಗೆ ತಂದಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಜಾತಿ ಜನಗಣತಿ ವರದಿಗೆ ಆಡಳಿತ ಕಾಂಗ್ರೆಸ್ ಪಕ್ಷದಲ್ಲೇ ವಿರೋಧವಿದೆ. ಒಂದೆಡೆ ಡಿಸಿಎಂ ಡಿ.ಕೆ.ಶಿವಕುಮಾರ್, ಮತ್ತೊಂದೆಡೆ ಶಾಮನೂರು ಶಿವಶಂಕರಪ್ಪ ವಿರೋಧದ ಧ್ವನಿ ಎತ್ತಿದ್ದಾರೆ.
ಎಚ್.ಕಾಂತರಾಜ್ ವರದಿಯಲ್ಲಿ ಏನಿದೆಯೋ ಅದನ್ನೇ ಕೆ.ಜಯಪ್ರಕಾಶ್ ಹೆಗ್ಡೆಯವರೂ ಕೊಟ್ಟಿದ್ದಾರೆ. ಅಂದ ಮೇಲೆ ಕಳೆದ ಕೆಲವು ವರ್ಷಗಳಲ್ಲಿ ಏನು ಬದಲಾವಣೆಯಾಗಿದೆ ? ವಾಸ್ತವವಾಗಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ 1.50 ಕೋಟಿ ಇದ್ದರೂ 1.08 ಕೋಟಿ ತೋರಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮುಂದಿನ ಏಪ್ರಿಲ್, ಮೇ ತಿಂಗಳಲ್ಲಿ ಜನಗಣತಿ ನಡೆಯಲಿದೆ. ಆಗ ಸರಿಯಾದ ಅಂಕಿ-ಅಂಶಗಳು ಸಿಗಲಿವೆ. ಇವರು ಮಾಡಿರುವುದು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಯೇ ಹೊರತುಪಡಿ ಜಾತಿ ಜನಗಣತಿ ಸಮೀಕ್ಷೆಯಲ್ಲವೆಂದು ಛಲವಾದಿ ನಾರಾಯಣಸ್ವಾಮಿ ವಾದಿಸಿದರು.
ವರದಿಯ ಸಾಧಕಬಾಧಕಗಳನ್ನು ಅರ್ಥ ಮಾಡಿಕೊಂಡು ಉಪಯುಕ್ತ ಎನ್ನುವುದಾದರೆ ಚರ್ಚೆಗೆ ಜನರ ಮುಂದಿಡುತ್ತಿದ್ದರು. ಆದರೆ ವರದಿ ಮುಚ್ಚಿದ ಲಕೋಟೆಯಲ್ಲಿದೆ ಎನ್ನುತ್ತಾ ಅಂಕಿ-ಅಂಶಗಳನ್ನು ಸೋರಿಕೆ ಚರ್ಚೆಗೆ ಅವಕಾಶ ಕೊಟ್ಟಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್‌ನವರು ಗಾಜಿನ ಮನೆಯಲ್ಲಿ ಕುಳಿತು ಬೇರೆಯವರ ಮೇಲೆ ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ. ಸುತ್ತಿಕೊಂಡಿರುವ ಹಗರಣಗಳು, ಕುರ್ಚಿಗಾಗಿ ಕಿತ್ತಾಟದ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಹವಣಿಸಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಛೇಡಿಸಿದರು.