ಸಿದ್ದುಗಳಿಂದ ನೆಲಕಚ್ಚಲಿದೆ ಕಾಂಗ್ರೆಸ್: ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ

20-klr-10
Published on

ಕೋಲಾರ: ಪಂಜಾಬ್‌ನಲ್ಲಿ ಸಿದು, ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರಿಂದ ಕಾಂಗ್ರೆಸ್ ನೆಲಕಚ್ಚಲಿದೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಭಿನ್ನಮತ ಪಕ್ಷದ ಅಧೋಗತಿಗೆ ಕಾರಣವಾಗುತ್ತಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ಮಾಲೂರಿನ ಕೋಡಿಹಳ್ಳಿ ಗೇಟ್ ಬಳಿ ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಹಳ್ಳಿಯಿಂದ ದಿಲ್ಲಿಯವರೆಗೆ ಬೆಳೆದಿದೆ. ರಾಷ್ಟ್ರೀಯ ಪಕ್ಷ ಎನ್ನುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷವಾಗಿದೆ. ಸಂಸತ್‌ನಲ್ಲಿ ಅಧಿಕೃತ ಪ್ರತಿಪಕ್ಷವಾಗಿಯೂ ಉಳಿದಿಲ್ಲ. ಪಂಜಾಬ್, ರಾಜಸ್ಥಾನ ಬಿಟ್ಟು ಉಳಿದೆಡೆ ಕಾಂಗ್ರೆಸ್ ಪಕ್ಷವನ್ನು ದುರ್ಬೀನು ಹಿಡಿದು ಹುಡುಕುವ ಪರಿಸ್ಥಿತಿ ಇದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯರಿಂದ ಕಾಂಗ್ರೆಸ್ ಒಡೆಯಲಿದೆ: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಭಿನ್ನಮತ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗುವ ಹಂತಕ್ಕೆ ಬಂದಿದೆ. ಪಕ್ಷದಲ್ಲಿ ಅವಕಾಶ, ಪ್ರಾಮುಖ್ಯತೆ ಸಿಗದಿದ್ದಲ್ಲಿ ಸಿದ್ದರಾಮಯ್ಯ ಪಕ್ಷ ಒಡೆದು ಹೊರಬರಬಹುದು. ಸಿದ್ದು ಅವರ ಸ್ವಭಾವ ಹೇಗೆ ಎಂದರೆ ಜೆಡಿಎಸ್‌ನಲ್ಲಿ ಅಧಿಕಾರ ಸಿಕ್ಕಿಲ್ಲವೆಂದು ಕಾಂಗ್ರೆಸ್ ಸೇರಿ ಸಿಎಂ ಆದರು. ಮುಂದೆ ಇಲ್ಲಿ ಅಧಿಕಾರ, ಪ್ರಾಮುಖ್ಯತೆ ಸಿಗದಿದ್ದರೆ ಕಾಂಗ್ರೆಸ್‌ನಲ್ಲಿ ಬಹಳ ದಿನ ಉಳಿಯುವುದಿಲ್ಲ ಎಂದು ಬಾಂಬ್ ಸಿಡಿಸಿದರು.

ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹೋಗಿ ಆಡಳಿತಕ್ಕೆ ಬರುತ್ತದೆಂದು ಕಾಂಗ್ರೆಸ್ಸಿಗರು ಭ್ರಮೆಯಲ್ಲಿದ್ದಾರೆ. ಸಿಎಂ ಯಾರಾಗಬೇಕೆಂದು ಒಳಗೆ ಫೈಟ್ ಶುರು ಆಗಿದೆ. 2023ರ ಚುನಾವಣೆಯಲ್ಲೂ ಬಿಜೆಪಿ ಆಡಳಿತಕ್ಕೆ ಬರುವುದು ನಿಶ್ಚಿತ ಎಂದರು.

ಕಾಯ್ದೆ ವಾಪಸ್: ರೈತರ ಆದಾಯ ದ್ವಿಗುಣಗೊಳಿಸುವುದು ಪ್ರಧಾನಿ ಮೋದಿ ಗುರಿಯಾಗಿತ್ತು. ಬದಲಾವಣೆಗೆ ಮೋದಿ ಹೊರಟಾಗ ಅಡೆತಡೆ ಆಗುವ ರೀತಿ ರೈತರ ಹೋರಾಟಕ್ಕೆ ಕಾಂಗ್ರೆಸ್ ಬಾಹ್ಯ ಕುಮ್ಮಕ್ಕು ನೀಡಿ ರೈತರ ಪರವಾದ ಪ್ರಯತ್ನಕ್ಕೆ ಅಡ್ಡಿ ಮಾಡಿದ್ದರಿಂದ ಮೋದಿ ಕೃಷಿ ಕಾಯ್ದೆ ವಾಪಸ್ ಪಡೆದಿದ್ದಾರೆ. ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ರೈತರಿಗೆ ಅನುಕೂಲವಾದ ಕಾನೂನು ಬರಬಹುದು. ಪ್ರತಿಪಕ್ಷಗಳಿಗೆ ರೈತರ ಹಿತಾಸಕ್ತಿ ಬೇಕಿಲ್ಲ, ರಾಜಕಾರಣ ಬೇಕಷ್ಟೇ. ಕಾಯ್ದೆ ವಾಪಸ್ ಜಯ-ಅಪಜಯ ಎನ್ನುವ ಪ್ರಶ್ನೆ ಇಲ್ಲ. ಮೋದಿ ವಿರುದ್ಧ ಮಾತನಾಡೋದಕ್ಕೆ ಕಾಂಗ್ರೆಸ್‌ಗೆ ಬೇರೆ ಯಾವುದೇ ವಿಷಯವಿಲ್ಲ. ಹೀಗಾಗಿ ಬಿಟ್ ಕಾಯಿನ್ ಹಾಗೂ ಕೃಷಿ ಕಾಯ್ದೆ ಬಗ್ಗೆ ಟೀಕೆ ಮಾಡ್ತಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಏನಾದರೂ ಒಂದು ಸಾಕ್ಷಿ ಇದ್ರೆ ನೀಡಲಿ ಎಂದು ಸವಾಲು ಹಾಕಿದರು.

ಸಚಿವ ಡಾ. ಅಶ್ವತ್ಥನಾರಾಯಣ ಮಾತನಾಡಿ, ಹತ್ತು ಹೆಜ್ಜೆ ಮುಂದಿಡಲು ಮೋದಿ ರೈತರ ಪರ ಒಂದು ಹೆಜ್ಜೆ ಹಿಂದೆ ಸರಿದಿರುವುದು ಸಮಾಜ, ದೇಶಕ್ಕೆ ಒಳ್ಳೆಯದು ಮಾಡುವ, ದೂರದೃಷ್ಟಿಯ ಪ್ರಾಮಾಣಿಕ ಪ್ರಯತ್ನವಷ್ಟೇ. ಬಿಟ್ ಕಾಯಿನ್ ಪ್ರಕರಣ ತನಿಖೆ ನಡೆಯುತ್ತಿದೆ. ಇದರಲ್ಲಿ ಯಾವುದೇ ಪಕ್ಷ, ವ್ಯಕ್ತಿ ಇದ್ದರೂ ಸರ್ಕಾರ ಅಥವಾ ಪಕ್ಷ ರಕ್ಷಣೆ ಮಾಡಲ್ಲ. ಸರ್ಕಾರ ಸತ್ಯ, ನ್ಯಾಯದ ಪರ ಕೆಲಸ ಮಾಡುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net