

ಬೆಂಗಳೂರು: ನಮಸ್ತೆ ಸದಾ ವತ್ಸಲೇ ಮಾತೃ ಭೂಮಿ ಎನ್ನುವ ನಿಮ್ಮ ಮಾತು ಹಾಗೂ ತಾಯಂದಿರಿಗೆ ನೀಡುವ ಗೌರವದ ಬಗ್ಗೆ ಈಗ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಆರ್‌ಎಸ್‌ಎಸ್ ಶಿಸ್ತಿನ ಸಿಪಾಯಿಗಳು ಇದಕ್ಕೆ ಸ್ಪಷ್ಟನೆ ನೀಡಬೇಕೆಂದು ಕಾಂಗ್ರೆಸ್‌ನ ಗುಂಪೊಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್, ಜಿಲ್ಲಾಧ್ಯಕ್ಷರಾದ ಕೆ.ವಿ ಗೌತಮ್, ಓ. ಮಂಜುನಾಥ್ ಅವರ ನೇತೃತ್ವದಲ್ಲಿ ಕೈ ಕಾರ್ಯಕರ್ತರು ಆರ್‌ಎಸ್‌ಎಸ್ ಕಚೇರಿಗೆ ತೆರಳಿ, ನಾವು ಎತ್ತಿರುವ ಪ್ರಶ್ನೆಗೆ ಸ್ಪಷ್ಟನೆ ನೀಡುವಂತೆ ಪತ್ರ ನೀಡಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹಾಗೂ ಮುನಿರತ್ನ ಮುಂತಾದವರ ಇತ್ತೀಚಿನ ನಡೆ, ನುಡಿಗಳು ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಬಿಜೆಪಿ ಬಹುತೇಕ ನಾಯಕರು ಮಾತೆತ್ತಿದರೆ ತಾವು ಆರ್‌ಎಸ್‌ಎಸ್ ಕಟ್ಟಾಳು, ಸಂಘದ ಶಾಖೆಯಲ್ಲಿ ಕಲಿತವರು ಎಂದು ಹೇಳುತ್ತಿರುತ್ತಾರೆ. ಈ ಬಗ್ಗೆ ಸಂಘದ ಅಭಿಪ್ರಾಯವೇನು? ಮತ್ತು ಈ ಎಲ್ಲರ ಮೇಲೆ ಆರ್‌ಎಸ್‌ಎಸ್ ಕೈಗೊಂಡ ಕ್ರಮಗಳೇನು? ಎಂದು ಪ್ರಶ್ನಿಸಲಾಗಿದೆ.