

ಬೆಂಗಳೂರು: ದೇಶಾದ್ಯಂತ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಪೌರತ್ವ ತಿದ್ದುಪಡಿ ಕಾನೂನು ಜಾರಿ ನಂತರದ ಬೆಳವಣಿಗೆಯನ್ನು ಪರಿಣಾಮಕಾರಿಯಾಗಿ ಬಳಸಿ ಕೊಳ್ಳುತ್ತಿರುವ ಕಾಂಗ್ರೆಸ್, ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ನಿರ್ಧರಿಸಿದೆ.
ಜನವರಿ 20ರಿಂದ ಆರಂಭವಾಗಬೇಕಾಗಿದ್ದ ವರ್ಷದ ಮೊದಲ ಅಧಿವೇಶನ ಫೆ.27ಕ್ಕೆ ಮುಂದೂಡಲ್ಪಟ್ಟಿದೆ. ಈ ನಡುವೆ ಹೋರಾಟದ ಕಾವನ್ನು ಹಾಗೆ ಉಳಿಸಿಕೊಳ್ಳುವುದು, ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಜನಾಭಿಪ್ರಾಯವನ್ನು ಇನ್ನಷ್ಟು ಗಟ್ಟಿಗೊಳಿಸಬೇಕು ಎಂದು ರಾಜ್ಯ ಕಾಂಗ್ರೆಸ್ಗೆ
ಎಐಸಿಸಿ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ. ಲೋಕಸಭೆಯಲ್ಲಿ ಅಂಗೀಕಾರಗೊಂಡು ರಾಷ್ಟ್ರಪತಿ ಯಿಂದಲೂ ಸಹಿಗೊಂಡ ಕಾಯ್ದೆ ಶಿಷ್ಟಾಚಾರದಂತೆ ಪ್ರತಿ ರಾಜ್ಯಗಳ ವಿಧಾನಸಭೆಯಲ್ಲಿ ಮಂಡನೆಯಾಗಬೇಕು. ರಾಜ್ಯದಲ್ಲಿ ಮಂಡನೆಯಾಗುವ ಸಂದರ್ಭ ಪ್ರತಿರೋಧವನ್ನು ಯಾವೆಲ್ಲ ರೂಪದಲ್ಲಿ ತೋರಿಸಬೇಕೆಂಬ ಬಗ್ಗೆ ಕೈ ನಾಯಕರು ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ.
ಕೇರಳ, ಪಶ್ಚಿಮ ಬಂಗಾಳ ಸೇರಿ ಹಲವು ರಾಜ್ಯಗಳು ಪೌರತ್ವ ಕಾಯ್ದೆ ಒಪ್ಪಲ್ಲ ಎಂದು ನಿರ್ಣಯಗಳನ್ನು ಮಂಡಿಸುತ್ತಿವೆ. ಇಂಥ ಸಂದರ್ಭದಲ್ಲಿ ಕೇಂದ್ರದ ಪರವಾಗಿ ಅಭಿಪ್ರಾಯ ಮೂಡಲು ಬಿಜೆಪಿ ಸರ್ಕಾರದ ರಾಜ್ಯಗಳು ಶೀಘ್ರವಾಗಿ ಕಾಯ್ದೆಗೆ ಒಪ್ಪಿಗೆ ಸೂಚಿಸುವ ಅಗತ್ಯತೆ ಇದೆ. ಹೀಗಾಗಿ ಕರ್ನಾಟಕದಲ್ಲಿ ಆದ್ಯತೆ ಮೇಲೆ ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿದೆ ಎಂಬ ಮಾತಿದೆ. ಕಾಯ್ದೆ ಮಂಡನೆಯಾಗುತ್ತಿದ್ದಂತೆ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡುವುದು ಕಾಂಗ್ರೆಸ್ ಲೆಕ್ಕಾಚಾರವಾಗಿದೆ. ಪ್ರತಿರೋಧದ ಅಭಿಪ್ರಾಯ ದಾಖಲಿಸಿ ಕಡತದಲ್ಲಿ ದಾಖಲಾಗುವಂತೆ ಮಾಡುವುದು, ತಕ್ಷಣಕ್ಕೆ ಕಾಯ್ದೆ ಒಪ್ಪದಂತೆ ಮುಂದೂಡಲು ಅವಕಾಶವಿರುವ ಕುರಿತಂತೆ ಕೈ ನಾಯಕರು ಚರ್ಚೆ ನಡೆಸಿದ್ದಾರೆ.
ಪಕ್ಷದ ಸಂಸದೀಯ ಪಟುಗಳ ಪ್ರಕಾರ, ಕೇಂದ್ರ ಸರ್ಕಾರದ ಈ ಕಾನೂನನ್ನು ಎಲ್ಲ ರಾಜ್ಯಗಳು ಒಪ್ಪಿಕೊಳ್ಳುವುದು ಅನಿವಾರ್ಯ. ಕರ್ನಾಟಕದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿರುವಾಗ ಪ್ರತಿರೋಧಿಸಬಹುದೆ ಹೊರತು ತಡೆಯೊಡ್ಡಲು ಬರಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಷತ್ನಲ್ಲಿ ಸರ್ಕಾರದ ಪರ ಸದಸ್ಯರ ಸಂಖ್ಯಾಬಲ ಇಲ್ಲದ ಹೊರತಾಗಿಯೂ ಕಾಯ್ದೆ ತಡೆಯಲು ಪಕ್ಷಕ್ಕೆ ಅವಕಾಶವಿಲ್ಲ. ಹೀಗಾಗಿ ಕಾಯ್ದೆ ವಿರುದ್ಧ ಜನರ ಗಮನ ಸೆಳೆಯಲು ಕಲಾಪವನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬುದನ್ನು ನಂತರ ತೀರ್ಮಾನ ಮಾಡಲಾಗುತ್ತದೆ ಎಂದು ಹಿರಿಯ ನಾಯಕರೊಬ್ಬರು ವಿಜಯವಾಣಿಗೆ ತಿಳಿಸಿದ್ದಾರೆ.