ರಾಮಮಂದಿರ ಉದ್ಘಾಟನೆಯನ್ನು ಕಾಂಗ್ರೆಸ್​ ರಾಜಕೀಯಗೊಳಿಸುತ್ತಿದೆ: ಹಿಮಾಂತ ಬಿಸ್ವಾಸ್​ ಶರ್ಮಾ

Himanta Biswa Sarma
Published on

ಗುವಾಹಟಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಭಕ್ತರು ಕಾತುರದಿಂದ ಕಾಯುತ್ತಿದ್ಧಾರೆ. ಇತ್ತ ರಾಮಮಂದಿರ ಉದ್ಘಾಟನೆ ಕಾಂಗ್ರೆಸ್​ ಹಾಘೂ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದ್ದು, ಕಾಂಗ್ರೆಸ್​ ರಾಮಮಂದಿರದ ವಿಚಾರವನ್ನು ರಾಜಕೀಯಗೊಳಿಸುತ್ತಿದೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾಸ್​ ಶರ್ಮಾ ಆರೋಪಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹಿಮಾಂತ, ರಾಹುಲ್ ಗಾಂಧಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ರಾಜಕೀಯಗೊಳಿಸುತ್ತಿದ್ದಾರೆ. ಇದು ರಾಜಕೀಯ ಕಾರ್ಯಕ್ರಮವಲ್ಲ, ಧಾರ್ಮಿಕ ಕಾರ್ಯಕ್ರಮ. ಇದು ನಮಗೆ ಐತಿಹಾಸಿಕ ದಿನ, ಭಾರತೀಯ ನಾಗರಿಕತೆಯ ವಿಜಯದ ದಿನ ಎಂದು ಬಣ್ಣಿಸಿದ್ದಾರೆ.

ನಿಮ್ಮ ಸಹಚರರು ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ, ಅದನ್ನು ರಾಜಕೀಯ ಸಮಾರಂಭವನ್ನಾಗಿ ಮಾಡಿದ್ದಾರೆ. ಒಂದು ವೇಳೆ ಕಾಂಗ್ರೆಸ್​ ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಹಾಜರಾಗಿ ಮುಂದಿನ ಸಾಲಿನಲ್ಲಿ ಕುಳಿತುಕೊಂಡರೆ ಯಾವುದೇ ರಾಜಕೀಯವಿರುವುದಿಲ್ಲ. ಧಾರ್ಮಿಕ ಕಾರ್ಯಕ್ರಮವನ್ನು ಕಾಂಗ್ರೆಸ್​ನವರು ಏಕೆ ರಾಜಕೀಯಗೊಳಿಸುತ್ತಿದ್ದಾರೆ ಎಂದು ಈವರೆಗೆ ನನಗೆ ಅರ್ಥವಾಗಿಲ್ಲ.

ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ತಮ್ಮ ಹಿಂದೂ ವಿರೋಧಿ ಕಲ್ಪನೆಯನ್ನು ಬಳಸಿಕೊಂಡು ಕಾರ್ಯಕ್ರಮವನ್ನು ರಾಜಕೀಯಗೊಳಿಸಲು ಯತ್ನಿಸುತ್ತಿದ್ದಾರೆ. ಎಲ್ಲರೂ ರಾಮಲಲ್ಲಾನ ದರ್ಶನವನ್ನು ಪಡೆಯುತ್ತಾರೆ ಹೊರತು ಯಾವ ರಾಜಕೀಯ ಭಾಷಣವಿರುವುದಿಲ್ಲ. ಕಾಂಗ್ರೆಸ್​ನವರೇ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಇದನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾಸ್​ ಶರ್ಮಾ ಕಿಡಿಕಾರಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net