ದೇಶ ವಿಭಜಿಸಿದ ಕಾಂಗ್ರೆಸ್; ಸ್ವಾತಂತ್ರ್ಯ ಚಳವಳಿಗಾರರ ಕನಸು ನುಚ್ಚುನೂರು

BJP program
Published on

ಬೆಂಗಳೂರು: ಸ್ವಾತಂತ್ರ್ಯ ಹೋರಾಟಗಾರರ ಕನಸು ನುಚ್ಚು ನೂರು ಮಾಡಿ ದೇಶ ವಿಭಜಿಸಿದ ಕಾಂಗ್ರೆಸ್, ಈಗಲೂ ಒಡೆದಾಳುವ ನೀತಿಯನ್ನೇ ತನ್ನ ಜಾಯಮಾನ ಮಾಡಿಕೊಂಡಿದೆ ಎಂದು ಮಾಜಿ ಮಂತ್ರಿ ಆರ್.ಅಶೋಕ್ ಟೀಕಿಸಿದರು.

ಬಿಜೆಪಿ ರಾಜ್ಯ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಭಾರತ ವಿಭಜನೆಯ ದುರಂತ ಕಥೆ ಪ್ರದರ್ಶಿನಿಗೆ ಚಾಲನೆ ನೀಡಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಇನ್ನಿತರರ ಜತೆಗೆ ಪ್ರದರ್ಶನ ಲಕಗಳನ್ನು ವೀಕ್ಷಿಸಿದರು. ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ತ್ಯಾಗ-ಬಲಿದಾನದಿಂದ ಗಳಿಸಿದ ಸ್ವಾತಂತ್ರ್ಯ ಬಲಿಷ್ಠ ಭಾರತದ ಕನಸು ಕಟ್ಟಿಕೊಟ್ಟಿತ್ತು. ಆದರೆ ಸ್ವಾತಂತ್ರ್ಯದ ಮುನ್ನಾ ದಿನವೇ ದೇಶ ವಿಭಜನೆಯಾಗಿದ್ದು, ಕರಾಳ ದಿನಕ್ಕೆ ಕಾಂಗ್ರೆಸ್ ಪಕ್ಷವೇ ನೇರ ಕಾರಣವೆಂದು ದೂರಿದರು.

ಬಿಜೆಪಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿಯಾಗಿದೆಯೆ ? ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗಾಗ್ಗೆ ಕೇಳುತ್ತಿರುತ್ತಾರೆ. ದೇಶವನ್ನು ತುಂಡರಿಸಿದ್ದೇ ಕಾಂಗ್ರೆಸ್ ಪಕ್ಷವೆಂದು ಹೇಳಲು ಬಯಸುವೆ ಎಂದು ಆರ್.ಅಶೋಕ್ ತಿವಿದರು.

ತುಷ್ಟೀಕರಣ ನೀತಿಯನ್ನು ಮುಂದುವರಿಸಿರುವ ಕಾಂಗ್ರೆಸ್ ಪಕ್ಷ ತನ್ನದು ವಿಭಜನೆ ಸಂಸ್ಕೃತಿ ಎಂದು ಸಾರುತ್ತಿದೆ. ಕಾಶ್ಮೀರ ನಮ್ಮದು ಎಂದು ಹೇಳುವಂತಹ ಎದೆಗಾರಿಕೆ ಅವರಲ್ಲಿದ್ದಿಲ್ಲ. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಎದೆಗಾರಿಕೆ ಪ್ರದರ್ಶಿಸಿತು ಎಂದರು.

ತೀವ್ರ ವಿರೋಧ

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ ‘ಗಡಿನಾಡ ಗಾಂಧಿ’ ಖಾನ್ ಅಬ್ದುಲ್ ಗಾರ್ ಖಾನ್ ಅವರು ದೇಶ ವಿಭಜನೆಯನ್ನು ತೀವ್ರವಾಗಿ ವಿರೋಧಿಸಿದ್ದರು. ಸ್ವಾರ್ಥಕ್ಕಾಗಿ ದೇಶ ವಿಭಜನೆ ಮಾಡಿದಿರಿ ಎಂದು ಕಿಡಿಕಾರಿದ್ದರು.

ಲಾಹೋರ್‌ನ್ನು ಪಠಾಣರ ಕೈಗೆ ಕೊಡುವ ಉದ್ದೇಶದಿಂದ ದೇಶ ವಿಭಜಿಸಲಾಗಿದೆ ಎಂಬ ಖಾನ್ ಅಬ್ದುಲ್ ಗಾರ್ ಖಾನ್ ಮಾತು ಇವತ್ತು ಪ್ರಸ್ತುತವಾಗಿದೆ. ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ. ಅಲ್ಲಿನ ಜನರ ಜೀವನ ನರಕವಾಗಿದ್ದರೆ, ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಕೀರ್ತಿ ಜಗದಗಲ ಹರಡಿದೆ ಎಂದು ಕಾರಜೋಳ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net