

ಬೆಂಗಳೂರು: ಮುಂಬರುವ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲು ಹಾಗೂ ನಿರಂತರವಾಗಿಸಲು ಕಾಂಗ್ರೆಸ್ ಮಹತ್ವದ ತೀರ್ಮಾನ ಮಾಡಿದೆ. ಭಾನುವಾರ ನಡೆದ ಪಕ್ಷದ ಹಿರಿಯರ ಸಭೆಯಲ್ಲಿ ಪಾದಯಾತ್ರೆ ಹಾಗೂ ಜನಜಾಗೃತಿ ‘ಜನಾಕ್ರೋಶ’ ರ‍್ಯಾಲಿ ನಡೆಸುವ ಸಂಬಂಧ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗಿದೆ. ಸಭೆ ಬಳಿಕ ಮಾಹಿತಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ದೇಶ ಆರ್ಥಿಕ ಬಿಕ್ಕಟ್ಟು, ಜನರ ನೋವು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವೈಫಲ್ಯಗಳ ಹಿನ್ನೆಲೆಯಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ. ಪ್ರತಿ ಕ್ಷೇತ್ರ, ಪಂಚಾಯಿತಿ ಹಾಗೂ ಜಿಲ್ಲಾಮಟ್ಟದಲ್ಲಿ ರಾಜ್ಯದ ಎಲ್ಲ ನಾಯಕರು ಪ್ರವಾಸ ಮಾಡಿ ಜಾಗೃತಿ ಮೂಡಿಸಲು ಎಐಸಿಸಿ ನಿರ್ದೇಶನದಂತೆ ಕಾರ್ಯಕ್ರಮ ರೂಪಿಸಿದ್ದೇವೆ ಎಂದು ವಿವರಿಸಿದರು.
ಮೇಕೆದಾಟು ಅಣೆಕಟ್ಟು ಯೋಜನೆ ಕಾಮಗಾರಿ ತಕ್ಷಣ ಆರಂಭಕ್ಕೆ ಆಗ್ರಹಿಸಿ ಡಿಸೆಂಬರ್ ಮೊದಲ ವಾರ ಮೇಕೆದಾಟಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲಾಗುವುದು. ಸುಮಾರು 100ಕ್ಕೂ ಹೆಚ್ಚು ಕಿ.ಮೀ. ಈ ಪಾದಯಾತ್ರೆ ನಡೆಯಲಿದೆ. ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ ಮತ್ತಿತರ ಜಿಲ್ಲೆಗಳ ಪಕ್ಷದ ಮುಖಂಡರು, ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕೇಂದ್ರ ಹಾಗೂ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇದ್ದರೂ ಮೇಕೆದಾಟು ಯೋಜನೆ ಬಗ್ಗೆ ಆಸಕ್ತಿ ತೋರಿಸಿಲ್ಲ. ಯೋಜನೆ ಆರಂಭಿಸಲು ಕೋರ್ಟ್ನಿಂದ ಯಾವುದೇ ಅಡೆತಡೆ ಇಲ್ಲ. ಈ ಯೋಜನೆಗೆ ಕೇಂದ್ರದಿಂದ ಪರಿಸರ ಅನುಮತಿ ಪತ್ರ ಮಾತ್ರ ಬೇಕಾಗಿದೆ. ಆದರೂ ಈ ಎರಡೂ ಸರ್ಕಾರಗಳು ಬದ್ಧತೆ ಪ್ರದರ್ಶಿಸುತ್ತಿಲ್ಲ ಎಂದ ಡಿಕೆಶಿ, ಸಿಎಂ ಕೂಡ ಯಾರ ಅನುಮತಿ ಬೇಕಾಗಿಲ್ಲ, ನಾವು ಯೋಜನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರಿಗೆ ರಾಜಕೀಯ ಒತ್ತಡ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಯೋಜನೆ ಆರಂಭಿಸುವ ಇಚ್ಛಾಶಕ್ತಿ ಮಾತ್ರ ಕಾಣುತ್ತಿಲ್ಲ ಎಂದು ಟೀಕಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೇಕೆದಾಟು ಯೋಜನೆಗೆ ನಮ್ಮ ಸರ್ಕಾರ ಡಿಪಿಆರ್ ಸಿದ್ಧಪಡಿಸಿ ಕೇಂದ್ರದ ಪರಿಸರ ಇಲಾಖೆ ಅನುಮತಿಗೆ ಕಳುಹಿಸಿದ್ದೆವು. ಈ ಯೋಜನೆಗೆ ಯಾವ ಅಡೆತಡೆಯೂ ಇಲ್ಲ. ತಮಿಳುನಾಡಿನವರು ಸುಮ್ಮನೆ ಕ್ಯಾತೆ ತೆಗೆಯುತ್ತಿದ್ದು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು. ಕಾವೇರಿ ವಿಚಾರದಲ್ಲಿ ತಮಿಳುನಾಡಿಗೆ ನ್ಯಾಯಾಧೀಕರಣದ ಆದೇಶದಲ್ಲಿ ಎಷ್ಟು ಪಾಲಿನ ನೀರು ನೀಡಲಾಗಿದೆಯೋ ಅಷ್ಟರ ಮೇಲೆ ಮಾತ್ರ ಅವರಿಗೆ ಹಕ್ಕಿದೆ. ಈ ಯೋಜನೆಯಿಂದ ಅವರಿಗೇನು ತೊಂದರೆ ಇದೆ ಎಂದು ಪ್ರಶ್ನಿಸಿದರು.
ಸದಸ್ಯತ್ವ ನೋಂದಣಿ ಅಭಿಯಾನ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯಕಾರಿ ಸಮಿತಿ 12 ವರ್ಷಗಳ ನಂತರ ಚುನಾವಣೆ ವೇಳಾಪಟ್ಟಿ ನಿಗದಿ ಮಾಡಿದ್ದು, ಆನ್ಲೈನ್ ಹಾಗೂ ಆಫ್ಲೈನ್ ಸದಸ್ಯತ್ವ ನೋಂದಣಿ ಮಾಡಿಕೊಳ್ಳಲು ಆರಂಭ ಮಾಡಿದೆ. ರಾಜ್ಯದ ನಾಯಕರೆಲ್ಲ ಸೇರಿ ಬೆಂಗಳೂರಿನಲ್ಲಿ ನ.14ರಂದು ಸದಸ್ಯತ್ವ ನೋಂದಣಿ ಆರಂಭಿಸಲು ತೀರ್ವನಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು. ಹಿಂದೆ ಸದಸ್ಯರಾಗಿ ಕೆಲಸ ಮಾಡಿರುವವರು ಕೂಡ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಹೊಸದಾಗಿ ಸದಸ್ಯತ್ವ ಪಡೆಯುವವರು 5 ರೂ. ಕಟ್ಟಿ ಅರ್ಜಿ ತುಂಬಬೇಕು. ಸಕ್ರಿಯ ಸದಸ್ಯರಾಗಲು 100 ರೂ. ಕಟ್ಟಬೇಕು ಎಂದರು.