ಕಾಂಗ್ರೆಸ್ ಪಕ್ಷ ನಿಜವಾದ ದಲಿತ ವಿರೋಧಿ

skp byv (1)
ಶಿಕಾರಿಪುರದಲ್ಲಿ ಸಂವಿಧಾನ ಗೌರವ ಅಭಿಯಾನವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕೆ.ಎಸ್.ಗುರುಮೂರ್ತಿ, ಶೈಲಾ ಮಡ್ಡಿ, ಬಿ.ಎಸ್‌ಎನ್‌ಎಲ್ ಶಿವಪ್ಪ, ಚಂದ್ರಪ್ಪ, ಹನುಮಂತಪ್ಪ, ವೀರನ ಗೌಡ ಇತರರಿದ್ದರು.
Published on

ಶಿಕಾರಿಪುರ: ಸಂವಿಧಾನ ನಮ್ಮ ದೇಶದ ಹಿರಿಮೆ. ಇದರ ಕೃರ್ತೃ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಬಿಜೆಪಿ ಎಂದಿಗೂ ಗೌರವ ನೀಡುತ್ತ ಬಂದಿದೆ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಸಂವಿಧಾನ ಗೌರವ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಬಾಬಾಸಾಹೇಬರಿಗೆ ಅವಮಾನ ಮಾಡುತ್ತ ಬಂದಿರುವುದು ಕಾಂಗ್ರೆಸ್ ಪಕ್ಷ. ಅವರು ಸಂಸತ್ ಪ್ರವೇಶಿಸದಂತೆ ಎರಡು ಬಾರಿ ಅವರನ್ನು ಸೋಲಿಸಿದ್ದು ಕಾಂಗ್ರೆಸ್ ಪಕ್ಷ ಎಂದು ದೂರಿದರು.

ಇವತ್ತಿಗೂ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಅಂಬೇಡ್ಕರ್ ಜನ್ಮಸ್ಥಳ, ಅವರು ವಿದ್ಯಾಭ್ಯಾಸ ಮಾಡಿದ ಲಂಡನ್‌ನ ಮನೆ ಸೇರಿ ಐದು ಕ್ಷೇತ್ರಗಳನ್ನು ಅಭಿವೃದ್ಧಿ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ. ಅವರು ಎಲ್ಲೇ ಹೋದರೂ ಸ್ಮರಿಸುವುದು ಬಸವಣ್ಣ ಮತ್ತು ಬಾಬಾ ಸಾಹೇಬರನ್ನು ಎಂದು ತಿಳಿಸಿದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್ ದಲಿತ ವಿರೋಧಿಗಳು ಎಂದು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಲೇ ಇದೆ. ಆದರೆ ವಾಸ್ತವವಾಗಿ ಕಾಂಗ್ರೆಸ್ ಪಕ್ಷ ನಿಜವಾದ ದಲಿತ ವಿರೋಧಿ. ಬಿಜೆಪಿ ಯಾವತ್ತೂ ದಮನಿತರ ದನಿಯಾಗಿ ಕೆಲಸ ಮಾಡುತ್ತಿದೆ. ದಲಿತರು ಕೂಡ ಪಕ್ಷದ ಮೇಲೆ ಅಪಾರ ಅಭಿಮಾನ ಹೊಂದಿದ್ದಾರೆ. ಹಿಂದುಳಿದ ವರ್ಗಗಳಿಗೆ ಈಗ ಕಾಂಗ್ರೆಸ್ ಪಕ್ಷದ ನಾಟಕ ಅರ್ಥವಾಗಿದೆ ಎಂದು ಹೇಳಿದರು.

ಸಂವಿಧಾನ ಇಂದು ನಮಗೆ ಬದುಕು ಕೊಟ್ಟಿದೆ. ಎಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ತಂದು ಸಮಾನತೆ ಕಲ್ಪಿಸಿದೆ. ಸಂವಿಧಾನ ನಮಗೆ ಅತ್ಯಮೂಲ್ಯ ಮತ್ತು ಪವಿತ್ರ ಗ್ರಂಥವಿದ್ದಂತೆ. ಹಿಂದುಳಿದ ವರ್ಗದವರು ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರಲು ಸಂವಿಧಾನವೇ ಕಾರಣ ಎಂದು ಅಭಿಪ್ರಾಯಪಟ್ಟರು.

ಪ್ರತಿ ಮನೆಯಲ್ಲೂ ಸಂವಿಧಾನದ ಪುಸ್ತಕ ಇರಬೇಕು. ನಮ್ಮನ್ನು ಸ್ವಾಭಿಮಾನದಿಂದ ಬದುಕುವಂತೆ ಮಾಡಿದಂತಹ ಸಂವಿಧಾನ ನಮಗೆ ದೈವ ಸಮಾನ. ರಾಷ್ಟ್ರದ ಆಡಳಿತದಲ್ಲಿ ಸಂವಿಧಾನವೇ ಉಸಿರು. ಸಂವಿಧಾನದ ಹೊರತಾಗಿ ನಮ್ಮ ಬದುಕನ್ನು ಕಲ್ಪಿಸಲೂ ಸಾಧ್ಯವಿಲ್ಲ. ಅಂಬೇಡ್ಕರ್ ಅವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ. ಅವರು ಸಂವಿಧಾನದ ಮೂಲಕ ಹೊಸ ವ್ಯಾಖ್ಯಾನ ಬರೆದವರು ಎಂದು ಸ್ಮರಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಬಿಎಸ್‌ಎನ್‌ಎಲ್ ಶಿವಪ್ಪ, ಚಂದ್ರಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಹನುಮಂತಪ್ಪ, ಯುವ ಮೋರ್ಚಾ ಅಧ್ಯಕ್ಷ ವೀರನ ಗೌಡ, ಗಿರೀಶ್, ಪಾಲಾಕ್ಷಪ್ಪ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net