ಸರ್ಕಾರದ ಮೇಲೆ ಹೆಚ್ಚಿದ ಸ್ವಪಕ್ಷೀಯರ ಒತ್ತಡ; ದನಿ ಎತ್ತಿದ ಹಿರಿಯ ನಾಯಕರು, ಆಪರೇಷನ್ ಹಸ್ತಕ್ಕೂ ಆಕ್ಷೇಪ

Congress (6)
Published on

ಬೆಂಗಳೂರು: ನಿಗಮ ಮಂಡಳಿ ನೇಮಕ ವಿಚಾರ ಹಾಗೂ ಸಚಿವರ ನಡವಳಿಕೆ ಕುರಿತು ಸರ್ಕಾರದ ಮೇಲೆ ಸ್ವಪಕ್ಷೀಯರ ಒತ್ತಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಭಾನುವಾರ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಾಯಕ, ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್ ಮಾತಿಗೆ ಇಡೀ ಸಭೆ ಒಕ್ಕೊರಲ ದನಿಯಾಗಿದೆ. ಅಂದಹಾಗೆ, ಬಿ.ಎಲ್.ಶಂಕರ್ ನಿಗಮ ಮಂಡಳಿ ನೇಮಕ ಸಂಬಂಧ ತಮ್ಮ ಗಟ್ಟಿ ದನಿಯನ್ನು ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಹೆಸರನ್ನು ಪ್ರಸ್ತಾಪ ಮಾಡಿದ್ದಾರೆ. ಯತೀಂದ್ರರನ್ನು ಆಶ್ರಯ ಸಮಿತಿ ಸದಸ್ಯರನ್ನಾಗಿ ಮಾಡಲಾಗಿದೆ. ಅದೇ ಮಾದರಿಯಲ್ಲಿ ಪಕ್ಷದ ನಿಷ್ಠಾವಂತರನ್ನು, ಕಾರ್ಯಕರ್ತರನ್ನೂ ಪರಿಗಣಿಸಿ ಎಂದು ಸಲಹೆ ನೀಡಿದ್ದಾರೆ.

ಹಣವಂತರನ್ನು ಬಿಟ್ಟು ಪಕ್ಷ ನಿಷ್ಠರಿಗೆ, ಶಾಸಕರಿಗಿಂತ ಕಾರ್ಯಕರ್ತರಿಗೆ ಅವಕಾಶ ಕೊಡಿ. ನಗರ ಸ್ಥಳೀಯ ಮಟ್ಟದ ಕಮಿಟಿಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ನೇಮಕ ಮಾಡಿ ಎಂದು ಹೇಳಿದ ಅವರು ಮಾಜಿ ಶಾಸಕರು, ಚುನಾವಣೆಯಲ್ಲಿ ಸೋತಂಥವರನ್ನು ಮತ್ತೆ ಬೋರ್ಡ್, ಕಾರ್ಪೋರೇಷನ್‌ಗಳಿಗೆ ಸದಸ್ಯರನ್ನಾಗಿ ನೇಮಕ ಮಾಡುವುದು ಬೇಡವೆಂದು ಗಡಸು ದನಿಯಲ್ಲಿ ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ, ಆದರೆ ಬಿಜೆಪಿ ಸೋತಿದೆಯೇ? ಎಂದು ಪ್ರಶ್ನಿಸಿದ ಅವರು ನಾವು ಹೆಚ್ಚಿನ ಸ್ಥಾನವನ್ನು ಗೆದ್ದಿರಬಹುದು. ಆದರೆ, ಬಿಜೆಪಿಯ ವೋಟ್ ಶೇರ್ ಹಾಗೆಯೇ ಇದೆ. ನಾವು ಬಿಜೆಪಿ ವೋಟ್ ಶೇರ್ ಹೆಚ್ಚಾಗುವುದಕ್ಕೆ ಬಿಟ್ಟರೆ ನಮಗೆ ಕಷ್ಟ. ಈ ಬಾರಿ ಇರುವಷ್ಟು ಅವಕಾಶ ಯಾವತ್ತೂ ಇರಲಿಲ್ಲ ಎಂದರು.

ಹೊರಗಿನಿಂದ ಬಂದವರು ಡೈರೆಕ್ಟ್ ಪ್ರವೇಶ ಮಾಡಿ, ಟಿಕೆಟ್ ಪಡೆದು ಅಧಿಕಾರವನ್ನೂ ಪಡೆಯುತ್ತಾರೆ, ಮುಂದಿನ ಚುನಾವಣೆಗೆ ಮತ್ತೊಂದು ಪಕ್ಷಕ್ಕೆ ಹೋಗುತ್ತಾರೆ. ಪಕ್ಷದ ಕಾರ್ಯಕರ್ತರಿಗೆ ಈ ಬಗ್ಗೆ ನೋವಿದೆ ಎಂಬ ಇತ್ತೀಚಿನ ಆಪರೇಷನ್ ಹಸ್ತದ ಬಗ್ಗೆಯೂ ಅಸಮಾಧಾನ ವ್ಯಕ್ತವಾಯಿತು.

ಸಭೆಯಲ್ಲಿ ಶಾಸಕ ಪುಟ್ಟರಂಗ ಶೆಟ್ಟಿಯವರ ನಿಗಮ ಮಂಡಳಿ ಅಪೇಕ್ಷೆ, ಶಾಸಕ ಶಿವಲಿಂಗೇಗೌಡರಿಂದ ಪಕ್ಷದ ಕಾರ್ಯಕರ್ತರ ಕಡಗಣನೆ ಕುರಿತಂತೆಯೂ ಅಸಮಾಧಾನ ವ್ಯಕ್ತವಾಯಿತು.

ಶನಿವಾರ ಶಾಸಕ ಬಸವರಾಜ ರಾಯರೆಡ್ಡಿ ಅವರು ಸರ್ಕಾರಕ್ಕೆ ಮತ್ತೊಂದು ಪತ್ರ ಬರೆದು ಅಸಮಾಧಾನವನ್ನು ಹೊರಹಾಕಿದ್ದರು. ಪ್ರತಿಯಾಗಿ ಚನ್ನಗಿರಿ ಶಾಸಕ ಶಿವಗಂಗಾ ಮಾತು ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ ಎಂದು ಬಿಂಬಿಸುವಂತಿದೆ. ಅಚ್ಚರಿ ಎಂದರೆ ರಾಯರಡ್ಡಿ ಸಿದ್ದರಾಮಯ್ಯ ಪರಮಾಪ್ತರಾಗಿದ್ದರೆ, ಶಿವಗಂಗಾ ಡಿ.ಕೆ.ಶಿವಕುಮಾರ್ ಆಪ್ತ. ಇವರಿಬ್ಬರ ಹೇಳಿಕೆ, ಪತ್ರಗಳು ಸಾಕಷ್ಟು ಕುತೂಹಲವನ್ನೂ ಹುಟ್ಟಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net