ಬೇಲೂರು: ಕುರುಬರ ಆಶೋತ್ತರಗಳನ್ನು ರಕ್ಷಿಸುವುದಕ್ಕಾಗಿ ಅ.2 ರಂದು ಬೆಳಗಾವಿಯಲ್ಲಿ ನಡೆಯುವ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕುರುಬರ ಬಗ್ಗೆ ಆಮೂಲಾಗ್ರ ಚಿಂತನ ಮಂಥನ ನಡೆಸಿ, 3 ರಂದು ಬೃಹತ್ ರಾಷ್ಟ್ರೀಯ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಜಿಲ್ಲಾಧ್ಯಕ್ಷ ರಂಗನಾಥ್ ಹೇಳಿದರು.
ಈ ನೆಲವನ್ನಾಳಿದ ಇತಿಹಾಸ ಹೊಂದಿರುವ ಹಾಗೂ ಪಶುಸಂಗೋಪನೆಯನ್ನೇ ಕಸುಬಾಗಿ ನಂಬಿ ಬದುಕುತ್ತಿರುವ ಕುರುಬ ಸಮಾಜ ಕೇವಲ ಕರ್ನಾಟಕ ಮಾತ್ರವಲ್ಲ, ಭಾರತ ಮತ್ತು ವಿಶ್ವ ಎಲ್ಲಡೆಯೂ ಹರಡಿ ಹಂಚಿ ಹೋಗಿದ್ದಾರೆ. ಭಾರತದಲ್ಲೇ ವಿವಿಧ ರಾಜ್ಯಗಳಲ್ಲಿ ಕುರುಬ, ಧನಗರ್, ಕುರುಮನ್, ಪಾಲ್, ಬಘೇರಾ, ದೆವಸೀ, ರಾಬರಿ ಮೊದಲಾದ ಹೆಸರಿನಲ್ಲಿ ಕರೆಯಲ್ಪಡುತಿದ್ದು, ದೇಶದಲ್ಲಿ 12 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವದಲ್ಲಿ ಅಲ್ಲಲ್ಲಿ ಉಳಿದಿರುವ ಸಮುದಾಯದ ಬೇರುಗಳನ್ನು ಒಗ್ಗೂಡಿಸಿ ಬೆಳೆಸುವ ಉದ್ದೇಶದಿಂದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಪ್ರಾರಂಭಿಸಿ ಅ.2 ರಂದು ಕಾರ್ಯಕಾರಿ ಸಮಿತಿ ಸಭೆ ಹಾಗೂ 3 ರಂದು ರಾಷ್ಟ್ರೀಯ ಸಮಾವೇಶವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯಿಂದ ಸ್ವಯಂ ಪ್ರೇರಿತರಾಗಿ 4 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುತಿದ್ದೇವೆ ಎಂದರು.
ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್‌ನ ಜಂಟಿ ಕಾರ್ಯದರ್ಶಿ ನವೀನ್ ಪಟೇಲ್ ಮಾತನಾಡಿ, ವಿಶ್ವದಾದ್ಯಂತ ಇರುವ ಸಮುದಾಯವನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ನಾಡಿನ ಹಾಗೂ ಗಡಿಯಾಚೆ ಇರುವ ಕುರುಬ ಸಮಾಜದವರ ಸಂಘಟನೆಯ ಎಲ್ಲ ಕಾರ್ಯಕರ್ತರು ಸಹಭಾಗಿತ್ವ ನೀಡಿದ್ದಾರೆ. ಜತೆಗೆ ರಾಜ್ಯದ ಮೂಲೆ ಮೂಲೆಯಲ್ಲಿರುವ ಸಮಾಜದವರು ಬೆಳಗಾವಿ ಸಮಾವೇಶಕ್ಕೆ ಬರುವ ಮೂಲಕ ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದರು.
ಕುರುಬರ ಸಂಘದ ಜಿಲ್ಲಾ ನಿರ್ದೇಶಕ ಬಿ.ಎಂ.ಸಂತೋಷ್, ರಾಜ್ಯ ಕುರುಬರ ಸಂಘದ ನಿರ್ದೇಶಕ ಹರೀಶ್, ಹಾಲು ಮತ ಮಹಾಸಭಾ ತಾಲೂಕು ಅಧ್ಯಕ್ಷ ರಾಜಶೇಖರ್ ಇದ್ದರು.