ಪ್ರಧಾನಿ ಮೋದಿ ವಿರುದ್ಧ ಹಕ್ಕು ಚ್ಯುತಿ ಮಂಡಿಸಿದ ಕಾಂಗ್ರೆಸ್​;​​ ಕಾರಣ ಹೀಗಿದೆ

Untitled-design-2024-07-31T151914.627-1
Published on

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಅನುರಾಗ್ ಠಾಕೂರ್ ಅವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಂಸದ ಚರಣ್‌ಜಿತ್ ಸಿಂಗ್ ಚನ್ನಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬುಧವಾರ(ಜುಲೈ 31) ವಿಶೇಷ ಹಕ್ಕು ಉಲ್ಲಂಘನೆಯ ನೋಟಿಸ್ ನೀಡಿದ್ದಾರೆ.

ಚರಣ್‌ಜಿತ್ ಸಿಂಗ್ ಚನ್ನಿ ಅವರು ಈ ನೋಟಿಸ್‌ನಲ್ಲಿ, ಪ್ರಧಾನಿ ಮೋದಿ ಅವರು ಸದನದ ಕಲಾಪದಿಂದ ತೆಗೆದುಹಾಕಲಾದ ಅನುರಾಗ್​​ ಠಾಕೂರ್​​​ ಅವರ ಭಾಷಣದ ಆಯ್ದ ಭಾಗಗಳನ್ನು ಒಳಗೊಂಡಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣದ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿಯವರ ಈ ನಡೆ ಸದನದ ವಿಶೇಷಾಧಿಕಾರದ ಉಲ್ಲಂಘನೆಯಾಗಿದೆ ಎಂದು ಅವರು ಆರೋಪಿಸಿದರು.

ನನ್ನ ಪ್ರಸ್ತಾವನೆಯನ್ನು ಅಂಗೀಕರಿಸಿ ಸದನದಲ್ಲಿ ಮಂಡಿಸಲು ಅವಕಾಶ ನೀಡುವಂತೆ ಕೋರುತ್ತೇನೆ ಎಂದು ಚನ್ನಿ ಲೋಕಸಭೆ ಸ್ಪೀಕರ್‌ಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಪ್ರಧಾನಮಂತ್ರಿಯವರ ವಿರುದ್ಧ ಸವಲತ್ತು ಉಲ್ಲಂಘನೆಯ ಕ್ರಮಕೈಗೊಳ್ಳುವಂತೆ ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು, ನನ್ನ ಯುವ ಸಹೋದ್ಯೋಗಿ ಶ್ರೀ ಅನುರಾಗ್ ಠಾಕೂರ್ ಅವರ ಈ ಭಾಷಣವನ್ನು ಕೇಳಲೇಬೇಕು. ಇದು ಸತ್ಯಗಳು ಮತ್ತು ಹಾಸ್ಯದ ಪರಿಪೂರ್ಣ ಮಿಶ್ರಣ INDIA ಬಣದ ಕೊಳಕು ರಾಜಕೀಯವನ್ನು ಬಹಿರಂಗಪಡಿಸುತ್ತದೆ ಎಂದು ಬರೆದಿದ್ದಾರೆ.

ಲೋಕಸಭೆಯಲ್ಲಿ ಮಂಗಳವಾರ ಬಜೆಟ್ ಚರ್ಚೆಯಲ್ಲಿ ಭಾಗವಹಿಸಿದ್ದ ಠಾಕೂರ್ ಅವರು ಜಾತಿ ಗಣತಿ ಬೇಡಿಕೆ ಕುರಿತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಜಾತಿ ಗೊತ್ತಿಲ್ಲದವರು ಜಾತಿಗಣತಿ ಬಗ್ಗೆ ಮಾತನಾಡುತ್ತಾರೆ ಎಂದು ಭಾಷಣದ ವೇಳೆ ಹೇಳಿದ್ದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net