ನವದೆಹಲಿ: ಓಲ್ಡ್ ರಾಜೇಂದ್ರ ನಗರದಲ್ಲಿನ ಕೋಚಿಂಗ್ ಸೆಂಟರ್‌ನ ನೆಲಮಾಳಿಗೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣವನ್ನು ದೆಹಲಿ ಹೈಕೋರ್ಟ್ ಬುಧವಾರ (ಜುಲೈ 31) ವಿಚಾರಣೆ ನಡೆಸಿತು. ಈ ವೇಳೆ ಕೋರ್ಟ್ ಎಂಸಿಡಿ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ಅಲ್ಲದೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್(ಎಂಸಿಡಿ) ಕಮಿಷನರ್, ಪೊಲೀಸ್ ಉಪ ಕಮಿಷನರ್ (ಡಿಸಿಪಿ) ಮತ್ತು ಐಒಗೆ ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ನೀಡಿದೆ.
ಇದನ್ನು ಓದಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಸಚಿವ ನಿತಿನ್ ಗಡ್ಕರಿ ಪತ್ರ; ಉಲ್ಲೇಖಿಸಿರುವ ಅಂಶಗಳೇನು ಗೊತ್ತಾ?
ಓಲ್ಡ್ ರಾಜೇಂದ್ರ ನಗರದಲ್ಲಿನ ಚರಂಡಿಗಳ ಮೇಲಿನ ಎಲ್ಲಾ ಅತಿಕ್ರಮಣಗಳನ್ನು ಶುಕ್ರವಾರದೊಳಗೆ ತೆಗೆದುಹಾಕುವಂತೆ ದೆಹಲಿ ಹೈಕೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿಯನ್ನು ರಚಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆಯ ವೇಳೆ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರ ವಿಭಾಗೀಯ ಪೀಠವು, ಫ್ರೀಬಿ ಕಲ್ಚರ್ ಕಾರಣದಿಂದಾಗಿ ನಗರದ ಜನಸಂಖ್ಯೆಯ ಸ್ಫೋಟದ ಹಿನ್ನೆಲೆಯಲ್ಲಿ ಮೂಲಭೂತ ಸೌಕರ್ಯಗಳನ್ನು, ವಿಶೇಷವಾಗಿ ನಗರದ ಒಳಚರಂಡಿ ವ್ಯವಸ್ಥೆಯನ್ನು ನವೀಕರಿಸಲು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿದೆ.
ತನಿಖೆಯ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕಾಗಿದೆ. ಇಲ್ಲದಿದ್ದರೆ ನಾವು ತನಿಖೆಯನ್ನು ಯಾವುದಾದರೂ ಕೇಂದ್ರೀಯ ಏಜೆನ್ಸಿ ಅಡಿಯಲ್ಲಿ ವರ್ಗಾಯಿಸುತ್ತೇವೆ. ನಾವು ಅದನ್ನು ಸಿವಿಸಿ (ಸಿಬಿಐ) ಅಡಿಯಲ್ಲಿ ತರುತ್ತೇವೆ ಅಥವಾ ಲೋಕಪಾಲ್ ಅಡಿಯಲ್ಲಿ ತರುತ್ತೇವೆ. ಕೆಲವು ಶಾಸನಬದ್ಧ ಕಾರ್ಯವಿಧಾನದ ಅಡಿಯಲ್ಲಿ ತನಿಖೆ ನಡೆಸಲು ನಾವು ಬಯಸುತ್ತೇವೆ ಎಂದು ಪೀಠವು ಹೇಳಿದೆ.
ಘಟನೆಯನ್ನು ಕ್ರಿಮಿನಲ್ ನಿರ್ಲಕ್ಷ್ಯದ ಪ್ರಕರಣ ಎಂದು ಕರೆದ ನ್ಯಾಯಾಲಯ, ಎಂಸಿಡಿ ಅತ್ಯಂತ ಕಿರಿಯ ಉದ್ಯೋಗಿಯನ್ನು ಅಮಾನತುಗೊಳಿಸಿದೆ. ಆದರೆ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಚರಂಡಿಗಳು ಎಲ್ಲಿ ಹರಿಯುತ್ತಿವೆ ಎಂಬುದು ಎಂಸಿಡಿಯಲ್ಲಿ ಯಾರಿಗೂ ತಿಳಿದಿಲ್ಲ ಎಂದು ಹೇಳಿದೆ. (ಏಜೆನ್ಸೀಸ್)
ಭಾರತೀಯ ಸಂವಿಧಾನದ ಮೊದಲ ಆವೃತ್ತಿ ಹರಾಜಿನಲ್ಲಿ 48 ಲಕ್ಷ ರೂ.ಗೆ ಮಾರಾಟ; ಇದರ ವಿಶೇಷತೆ ಏನು ಇಲ್ಲಿದೆ ಡೀಟೇಲ್ಸ್