

ಬೆಳಗಾವಿ: ಕರೊನಾ ವೈರಸ್ನಿಂದಾಗಿ ಅದೆಷ್ಟೋ ಮಂದಿ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಈ ಸಮಯದಲ್ಲಿ ಅಂಥವರ ಯೋಗಕ್ಷೇಮ ನೋಡಬೇಕಾಗಿರುವುದು ಜನಪ್ರತಿನಿಧಿಗಳ ಕರ್ತವ್ಯ.
ಆದರೆ ಕಾಂಗ್ರೆಸ್ ಶಾಸಕನೋರ್ವ ತನ್ನ ಬಳಿ ಸಹಾಯ ಕೇಳಲು ಬಂದ ಕ್ಷೇತ್ರದ ಮಹಿಳೆಯರೊಂದಿಗೆ ಬೇಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಶಾಸಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೈಲಹೊಂಗಲದ ಕಾಂಗ್ರೆಸ್ ಶಾಸಕ ಮಹಂತೇಶ ಕೌಜಲಗಿ ಹೀಗೆ ಉದ್ಧಟತನ ತೋರಿದವರು. ಲಾಕ್ಡೌನ್ನಿಂದ ಕಷ್ಟವಾಗುತ್ತಿದೆ, ಏನಾದರೂ ಸಹಾಯ ಮಾಡಿ ಎಂದು ಕೇಳಲು ಸ್ವಲ್ಪ ಜನ ಶಾಸಕ ಮಹಂತೇಶ್ ಅವರ ಮನೆಯ ಬಳಿ ಹೋಗಿದ್ದರು. ಆ ವೇಳೆ ಶಾಸಕರು ವಾಕಿಂಗ್ಗೆ ತೆರಳಿದ್ದರು. ವಾಪಸ್ ಬಂದು ಜನರ ಸಂಕಷ್ಟವನ್ನು ಆಲಿಸುವ ಬದಲು, ರಸ್ತೆಯ ಮೇಲೆ ನಿಂತು ಅವರಿಗೆ ಬೈದಿದ್ದಾರೆ.
ಎಲ್ಲ ಅಂಗಡಿಗಳೂ ಓಪನ್ ಆಗಿವೆ. ನೀವಿನ್ನು ಕೆಲಸಕ್ಕೆ ಹೋಗಿ. ಸುಮ್ಮನೆ ಇಲ್ಲಿ ಗುದ್ದಾಡಿಕೊಂಡು ಕುಳಿತುಕೊಳ್ಳಬೇಡಿ..ಹೋಗಿ ಹೋಗಿ ಎಂದು ಬೇಜವಾಬ್ದಾರಿಯುತವಾಗಿ ಉತ್ತರ ನೀಡಿದ ಶಾಸಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಶಾಸಕರ ಮಾತು ಕೇಳಿದ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುತ್ತ ಅಲ್ಲಿಂದ ತೆರಳಿದ್ದಾರೆ. 'ಇವರು ಎರಡನೇ ಸಲ ಹೀಗೆ ಮಾಡ್ತಿರೋದು. ವೋಟು ಕೇಳಲು ಬಂದಾಗ ಸಾಹೇಬ್ರಿಗೆ ನಾವೂ ಹೇಳುತ್ತೇವೆ' ಎನ್ನುತ್ತ ಹೋಗಿದ್ದು ವಿಡಿಯೋದಲ್ಲಿ ನೋಡಬಹುದು. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಕರೆಂಟ್ ಬಿಲ್ ಹೊರೆ ಗ್ರಾಹಕರ ಗಾಯಕ್ಕೆ ಬರೆ