ಹಿಮಾಚಲದಲ್ಲಿ ಕಾಂಗ್ರೆಸ್​ ಶಾಸಕರಿಂದ ಅಡ್ಡಮತದಾನ ಮಾಡಿದ್ದೇಕೆ? ಅಸಲಿ ಕಾರಣ ಹೇಳಿದ ಕೇಂದ್ರ ಸಚಿವ ಅನುರಾಗ್​!

anurag
Published on

ನವದೆಹಲಿ: ಭಾರಿ ಬಹುಮತ ಪಡೆದು ಮೂರು ರಾಜ್ಯಗಳಲ್ಲಿ ಗೆದ್ದಿ ಬೀಗಿದ್ದ ಕಾಂಗ್ರೆಸ್ ಒಂದು ರಾಜ್ಯದಲ್ಲಿ ಅರಿವಿಲ್ಲದಂತೆ ಕುಸಿದುಬಿದ್ದಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್​ ಶಾಸಕರು ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನದಿಂದ ಹಿಮಾಚಲ ಪ್ರದೇಶದ ರಾಜಕೀಯ ರಂಗೇರುತ್ತಿದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಅಲ್ಲಿನ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ದೆಹಲಿಯಲ್ಲಿ ಮಾತನಾಡಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಸಚಿವರು, ಕಾಂಗ್ರೆಸ್ ನೇತೃತ್ವದ ಹಿಮಾಚಲ ಪ್ರದೇಶ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, 14 ತಿಂಗಳೊಳಗೆ ಅಲ್ಲಿನ ಜನರು ಬೇಸತ್ತಿದ್ದಾರೆ ಎಂದು ಹೇಳಿದರು.

ಮಂಗಳವಾರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಚಲಾಯಿಸಿದ ಆರು ಶಾಸಕರು ಮುಖ್ಯಮಂತ್ರಿ ಸುಖ್ವಿಂದರ್​ ಸಿಂಗ್ ಸುಖು ಅವರ ಆಡಳಿತದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಅವರೊಂದಿಗೆ ಮಾತುಕತೆ ನಡೆಸುವಂತೆ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಮಲ್ಲಿಕಾರ್ಜುನ ಖರ್ಗೆ ನಿಯೋಜಿಸಿದ್ದಾರೆ.

ಹಿಮಾಚಲಪ್ರದೇಶದಲ್ಲಿ 68 ಸದಸ್ಯ ಬಲದ ಪೈಕಿ 40 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಆಡಳಿತಾರೂಢ ಕಾಂಗ್ರೆಸ್​ ಪಕ್ಷವು ಮೂರು ಪಕ್ಷೇತರ ಶಾಸಕರ ಬಲವನ್ನೂ ಹೊಂದಿತ್ತು. ಆದರೆ ಕಾಂಗ್ರೆಸ್​ ಪಕ್ಷದ ಆರು ಶಾಸಕರು ಹಾಗೂ ಮೂರು ಮಂದಿ ಪಕ್ಷೇತರ ಶಾಸಕರು ಅಡ್ಡ ಮತದಾನ ಮಾಡಿರುವುದರಿಂದ ಕಾಂಗ್ರೆಸ್​ ಪಕ್ಷದ ಅಧಿಕೃತ ಅಭ್ಯರ್ಥಿ ಅಭಿಷೇಕ್​ ಸಿಂಘ್ವಿ ಸೋಲು ಅನುಭವಿಸಿದ್ದಾರೆ.

ಕಾಂಗ್ರೆಸ್​ ಅಭ್ಯರ್ಥಿ ಮನುಸಿಂಘ್ವಿ ಮತ್ತು ಬಿಜೆಪಿಯ ಹರ್ಷ ಮಹಾಜನ್ ನಡುವೆ ಪೈಪೋಟಿ ಎದುರಾಗಿತ್ತು. ಇಬ್ಬರೂ 34-34 ಮತ ಗಳಿಸಿದ್ದರು. ಹೀಗಾಗಿ ವಿಜೇತರನ್ನು ಘೋಷಿಸಲು ಚೀಟಿ ಎತ್ತಲಾಯಿತು, ಮಹಾಜನ್​ಗೆ ಅದೃಷ್ಟ ಒಲಿಯಿತು. ಕಾಂಗ್ರೆಸ್‌ನ ಪ್ರತಿಷ್ಠೆಗೆ ಹೊಡೆತಕ್ಕಿಂತ ನಷ್ಟವು ತುಂಬಾ ದೊಡ್ಡದಾಗಿದೆ. ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ವಾರಗಳು ಬಾಕಿಯಿರುವುದು ಕಾಂಗ್ರೆಸ್‌ನ ಆತಂಕವನ್ನು ಹೆಚ್ಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net