

ಹೈದರಾಬಾದ್: ತೆಲಂಗಾಣದಲ್ಲಿ ನಿನ್ನೆಯಷ್ಟೇ (ನ.30) ಮತದಾನ ಮುಕ್ತಾಯವಾಗಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಸುಳಿವನ್ನು ವಿವಿಧ ಮತಗಟ್ಟೆಗಳ ಸಮೀಕ್ಷೆ ತಿಳಿಸಿವೆ. ಆಡಳಿತಾರೂಢ ಬಿಆರ್ಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಪೈಪೋಟಿ ಇದ್ದು, ಕುದುರೆ ವ್ಯಾಪಾರ ಸಂಭವವನ್ನು ತಡೆಗಟ್ಟಲು ಡಿ.3ರಂದು ಫಲಿತಾಂಶ ಪ್ರಕಟವಾಗುತ್ತಿದ್ದಂತೆ ತೆಲಂಗಾಣದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಸ್ಥಳಾಂತರ ಮಾಡುವತ್ತ ಕಾಂಗ್ರೆಸ್ ಹೈಕಮಾಂಡ್ ಚಿಂತಿಸುತ್ತಿದೆ ಎಂದು ತಿಳಿದುಬಂದಿದೆ.
ತೆಲಂಗಾಣ ಕಾಂಗ್ರೆಸ್ ಘಟಕದ ಮುಖ್ಯಸ್ಥ ರೇವಂತ್ ರೆಡ್ಡಿ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಚುನಾವಣಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ನಡೆಯಬಹುದು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಭಾನುವಾರದ ಮತ ಎಣಿಕೆಯ ನಂತರ ಶಾಸಕರನ್ನು ಸ್ಥಳಾಂತರಿಸುವ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್‌ಗೆ 70ಕ್ಕಿಂತ ಕಡಿಮೆ ಸೀಟುಗಳು ಬಂದರೆ, ಶಾಸಕರನ್ನು ಬೆಂಗಳೂರು ಅಥವಾ ಬೇರೆಡೆಗೆ ಸ್ಥಳಕ್ಕೆ ಸ್ಥಳಾಂತರಿಸುವ ಪ್ರಸ್ತಾಪವಿದೆ. ಬಹುಶಃ ಶಾಸಕರನ್ನು ಹೋಟೆಲ್ ಅಥವಾ ರೆಸಾರ್ಟ್‌ಗೆ ಸ್ಥಳಾಂತರ ಮಾಡಬಹುದು ಎಂದು ಕಾಂಗ್ರೆಸ್ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
119 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ತೆಲಂಗಾಣದಲ್ಲಿ ಸರ್ಕಾರ ರಚನೆಗೆ 60 ಸ್ಥಾನಗಳು ಬೇಕಿದೆ. ಕೆಲವೇ ಅಂತರದಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲಿದೆ ಎಂದು ಕೆಲವು ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಇನ್ನೂ ಕೆಲವು ಸಮೀಕ್ಷೆಗಳು ಕಾಂಗ್ರೆಸ್ ಸುಲಭವಾಗಿ ಗೆಲ್ಲಲಿದೆ ಎಂದಿವೆ. ಸಮೀಕ್ಷೆಯ ಬೆನ್ನಲ್ಲೇ ಮುಂದಿನ ತಯಾರಿಯಾಗಿ ತನ್ನ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಯಿರುವ ಕ್ಷೇತ್ರಗಳಿಗೆ ಕಾಂಗ್ರೆಸ್ ಇಬ್ಬರು ಸಂಯೋಜಕರನ್ನು ಕಳುಹಿಸಿದೆ ಎಂದು ವರದಿಯಾಗಿದೆ. ಫಲಿತಾಂಶದ ಬಳಿಕ ಚುನಾವಣಾ ಅಧಿಕಾರಿಗಳಿಂದ ಪ್ರಮಾಣಪತ್ರಗಳನ್ನು ಪಡೆದ ನಂತರ ಶಾಸಕರನ್ನು ಕಾರುಗಳ ಬೆಂಗಾವಲುಪಡೆಯಲ್ಲಿ ಬೆಂಗಳೂರಿಗೆ ಕರೆದು ತರುವ ಮೊದಲು ಅಜ್ಞಾತ ಸ್ಥಳಕ್ಕೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಶಾಸಕರನ್ನು ಸ್ಥಳಾಂತರಿಸಬೇಕಾದರೆ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಡಿಕೆಶಿ ಅವರು 2018ರಲ್ಲಿ ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತ ಪರೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಇದೇ ರೀತಿಯ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು. (ಏಜೆನ್ಸೀಸ್)