

ಬೆಂಗಳೂರು: ಬಿಜೆಪಿ ಹಾಗೂ ಜೆಡಿಎಸ್ ನಡುವಿನ ಮೈತ್ರಿ ಕುರಿತು ಕಾಂಗ್ರೆಸ್ ತನ್ನ ಟೀಕೆಯನ್ನು ಮತ್ತೂ ಮುಂದುವರಿಸಿದೆ. ಜನತಾದಳ ಹೆಸರನ್ನು ’ಕಮಲದಳ’ ಮಾಡಿಕೊಳ್ಳಲಿ, ಪಕ್ಷದ ಅಸ್ತಿತ್ವ ಇಲ್ಲದ ಕಾರಣ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ, ಜೆಡಿಎಸ್ ದುರ್ಬಲವಾಗಿ ಕೊನೆ ಹಂತದಲ್ಲಿದೆ, ಮೋದಿ ಪಾಪ್ಯುಲಾರಿಟಿ ಇಳಿಯುತ್ತದೆ ಎನ್ನುವುದಕ್ಕೆ ಮೈತ್ರಿ ಸಾಕ್ಷಿ. ಮೈತ್ರಿ ಎಂದರೆ ವೀಕ್ ಆಗಿದ್ದಾರೆ ಅಂತಲ್ಲವೇ? ಹೀಗೆ ಕಾಂಗ್ರೆಸ್ನ ನಾಯಕರು ಸಾಲುಸಾಲಾಗಿ ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಛೇಡಿಸಿದ್ದಾರೆ.
ಗೃಹ ಸಚಿವ ಜಿ.ಪರಮೇಶ್ವರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಬಿಜೆಪಿ ಯಾರ ಜತೆಗೂ ಮೈತ್ರಿ ಮಾಡಿಕೊಂಡಿರಲಿಲ್ಲ. ಈಗ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ ಅಂದರೆ ಅವರು ವೀಕ್ ಆಗಿದ್ದಾರೆ ಅಂತ ಅಲ್ಲವೇ ಎಂದರು.
ಮೈತ್ರಿ ಮಾಡಿಕೊಂಡು ಕಾಂಗ್ರೆಸನ್ನು ಹೆದರಿಸಲು ಹೊರಟಿದ್ದಾರೆ. ಈ ಮೂಲಕ ಕಾಂಗ್ರೆಸ್ ಗಟ್ಟಿಯಾಗಿದೆ ಎಂದು ಅವರೇ ಹೇಳುತ್ತಿದ್ದಾರೆ, ಅವರನ್ನು ಎದುರಿಸಲು ನಾವು ಸಿದ್ಧರಾಗಿದ್ದೇವೆ. 138 ವರ್ಷದಿಂದ ಕಾಂಗ್ರೆಸ್ ಇಂತಹದ್ದು ನೋಡಿಕೊಂಡು ಬಂದಿದೆ. ಯಾವ ಶಕ್ತಿ ಬಂದರೂ ಕಾಂಗ್ರೆಸ್ ಓಟವನ್ನ ತಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಅನ್ನೋದು ಸಾಧ್ಯವಿಲ್ಲ ಎಂದು ಹೇಳಿದರು.
ಸಚಿವ ಈಶ್ವರ ಖಂಡ್ರೆ ಮಾತನಾಡಿ, ದೇವೇಗೌಡರು ಹಿರಿಯ ರಾಜಕಾರಣಿ. ಆದರೆ, ಇವತ್ತು ಗೊಂದಲದ ವಾತಾವರಣದಲ್ಲಿದ್ದಾರೆ. ಅವರ ಪಕ್ಷ ಸಂಪೂರ್ಣ ದುರ್ಬಲವಾಗಿದೆ. ಆ ಪಕ್ಷ ಕೊನೆ ಹಂತದಲ್ಲಿದೆ. ಹೀಗಾಗಿ ಬಿಜೆಪಿ ಜತೆ ಮೈತ್ರಿ ತೀರ್ಮಾನ ಮಾಡಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಯಾವುದೇ ತೊಂದರೆ ಇಲ್ಲ ಎಂದರು.
ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಸಹ ಹಾಸ್ಯ ಮಾಡಿ ಕುಟುಕಿದೆ. ಜನತಾದಳ ಎಂಬ ಹೆಸರನ್ನು ’ಕಮಲದಳ’ ವೆಂದು ಬದಲಿಸಿಕೊಂಡರೆ ಒಳಿತು. ಆ ಪಕ್ಷದ ನಾಯಕರು ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ ಜಾತ್ಯಾತೀತತೆಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು ಎಂದು ಅಭಿಪ್ರಾಯಪಟ್ಟಿದೆ.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಜೆಡಿಎಸ್‌ನ ಬಿಟೀಂ ಬಿಜೆಪಿ ಅನ್ನೋದು ಸಾಬೀತಾಗಿದೆ. ನೂರು ದಿನಗಳೇ ಕಳೆದರೂ ಇನ್ನೂ ವಿಪಕ್ಷ ನಾಯಕನನ್ನ ಆಯ್ಕೆ ಮಾಡಿಲ್ಲ. ರಾಜ್ಯ ಬಿಜೆಪಿ ಅಧ್ಯಕ್ಷರಿಗೇ ಪಕ್ಷದ ಮೇಲೆ ಹಿಡಿತ ಇಲ್ಲ. ಒಂದು ರಾಷ್ಟ್ರೀಯ ಪಕ್ಷ ಪ್ರಾದೇಶಿಕ ಪಕ್ಷದ ಬೀಟಿಂ ರೀತಿ ಕೆಲಸ ಮಾಡುತ್ತಿದೆ ಎಂದರು.
ಬಿಜೆಪಿಯಿಂದ ಪದೇ ಪದೆ ಕನ್ನಡಿಗರಿಗೆ ಅವಮಾನ ಆಗುತ್ತಿದೆ. ಸದನ ನಡೆಯುವಾಗ ಯಾರು ಹೆಚ್ಚೆಚ್ಚು ಪ್ರಶ್ನೆ ಕೇಳಿದರು ಎಂಬುದು ಏಕೆಂದು ಗೊತ್ತಾಗಿದೆ. ಆದರೆ ಬಿಜೆಪಿಯವರ ಆ್ಯಕ್ಟಿಂಗ್ ದೆಹಲಿ ಲೀಡರ್ಸ್ ಯಾರೂ ಗಮನಿಸಿಲ್ಲ ಎಂದು ಕುಟುಕಿದರು.
ಇವರ ಮೈತ್ರಿ ಕೇವಲ ಸೀಟ್ ಶೇರಿಂಗ್‌ನಲ್ಲಿ ಮಾತ್ರವೇ ಅಥವಾ ವಿಧಾನಸಭೆ ಒಳಗೂ ಸೀಟು ಶೇರಿಂಗ್ ಆಗತ್ತಾ ನೋಡಬೇಕು ಎಂದ ಅವರು ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ಮೈತ್ರಿ ಅನಿವಾರ್ಯತೆ ಇಲ್ಲ, ಅವರ ಅಸ್ತಿತ್ವ ಕಾಪಾಡಿಕೊಳ್ಳಲು ಮೈತ್ರಿ ಮಾಡಿಕೊಂಡಿದ್ದಾರೆ. ಮೋದಿ ಪಾಪ್ಯುಲಾರಿಟಿ ಇಳಿಯುತ್ತದೆ ಎನ್ನುವುದಕ್ಕೆ ಮೈತ್ರಿ ಸಾಕ್ಷಿ, ಮೋದಿಯವರ ಆಟ ನಡೆಯುತ್ತಿಲ್ಲ ಎಂದು ಹೇಳಿದರು.
ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಜೆಡಿಎಸ್‌ನವರಿಗೆ ಅಸ್ತಿತ್ವ ಇಲ್ಲ. ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತದೆ ಎಂದು ಕನಸು ಕಂಡಿದ್ದರು. ಆದರೆ ಅವರ ಕನಸು ನನಸಾಗಿಲ್ಲ. ಹಾಗಾಗಿಯೇ ಅವರು ಹತಾಶಗೊಂಡಿದ್ದಾರೆ. ಅವರ ಪಕ್ಷದ ಅಸ್ತಿತ್ವ ಇಲ್ಲದ ಕಾರಣ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ ಮುಳುಗುತ್ತಿರೋದಲ್ಲ, ಮುಳುಗಿರುವ ಹಡಗು ಎಂದು ವ್ಯಾಖ್ಯಾನಿಸಿದರು.