ಒಳಮೀಸಲು ಜಾರಿಗೆ ಕೈ ನಾಯಕರ ಒತ್ತಡ; ಅಧಿವೇಶನದಲ್ಲಿ ಒಪ್ಪಿ ಕೇಂದ್ರಕ್ಕೆ ಕಳುಹಿಸಲು ಆಗ್ರಹ

congress
Published on

ಬೆಂಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ರಾಜ್ಯ ಸರ್ಕಾರ ಜಾರಿಗೆ ತರಬೇಕು. ಆ ಮೂಲಕ ಒಳಮೀಸಲಾತಿ ಅನುಷ್ಠಾನಗೊಳಿಸಬೇಕು ಎಂದು ಅಸ್ಪ ೃ್ಯ ಸಮುದಾಯದ ಕಾಂಗ್ರೆಸ್ ಹಿರಿಯ ನಾಯಕರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ ಚಂದ್ರಪ್ಪ, ವಿಧಾನಪರಿಷತ್ ಸದಸ್ಯ ಧರ್ಮಸೇನ ಜಂಟಿ ಸುದ್ದಿಗೋಷ್ಠಿ ನಡೆಸಿ, ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆಂದು ಬಿಜೆಪಿಯವರು ಚುನಾವಣೆಗೆ ಮುನ್ನ ಹೇಳಿಕೊಂಡಿದ್ದರು, ಈಗ ಏಕೆ ವರದಿ ಅನುಷ್ಠಾನ ಮಾಡುತ್ತಿಲ್ಲ. 24 ಗಂಟೆ ಎಂದರೆ ಎಷ್ಟು ದಿನ? ಇನ್ನು 24 ಗಂಟೆ ಮುಗಿದಿಲ್ಲ ಅನಿಸುತ್ತದೆ ಎಂದು ಕುಟುಕಿದರು.

ಕೆ.ಎಚ್.ಮುನಿಯಪ್ಪ ಮಾತನಾಡಿ, ಒಳ ಮೀಸಲಾತಿ ಜಾರಿಯಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ. ಸಂವಿಧಾನವನ್ನು ತಿರುಚಿದಂತೆಯೂ ಆಗುವುದಿಲ್ಲ. ಯಾವ ಸಮುದಾಯಗಳಿಗೂ ಅನ್ಯಾಯ ಆಗಬಾರದು, ಆ ರೀತಿ ಮೀಸಲಾತಿ ನೀಡಬೇಕೆಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ವರದಿ ಜಾರಿಯಾದರೂ ನಾವೆಲ್ಲ ಒಟ್ಟಾಗಿಯೇ ಇರುತ್ತೇವೆ. ಸಿಎಂ ಯಡಿಯೂರಪ್ಪ ಬಸವಣ್ಣನ ಅನುಯಾಯಿ, ಬಸವಣ್ಣನವರ ಸಿದ್ಧಾಂತ ಅಳವಡಿಸಿಕೊಂಡವರು ಮನಸ್ಸು ಮಾಡಿ ಜಾರಿ ಮಾಡಬೇಕು ಎಂದರು.

ಹಿಂದೆ ಸಿದ್ದರಾಮಯ್ಯ ವರದಿ ಜಾರಿಗೆ ಮುಂದಾಗಿದ್ದರು, ಚುನಾವಣೆ ಎದುರಾದ ಹಿನ್ನೆಲೆ ಅಲ್ಲಿಗೇ ಕೈಬಿಟ್ಟಿದ್ದರು. ಆಗ ಬಿಜೆಪಿಯವರು ಸರಿಯಾಗಿ ಬೆಂಬಲಿಸಲಿಲ್ಲ. ಈಗ ಸರ್ಕಾರವೂ ಬಿಜೆಪಿಯದ್ದೇ ಇದೆ. ಜೆಡಿಎಸ್ ಮತ್ತು ಕಾಂಗ್ರೆಸ್ ಇದಕ್ಕೆ ವಿರೋಧಿಸಲ್ಲ. ಹೀಗಾಗಿ ಮುಂಬರುವ ಅಧಿವೇಶನದಲ್ಲಿ ವರದಿಯನ್ನು ಒಪ್ಪಿ ಕೇಂದ್ರ ಸರ್ಕಾರಕ್ಕೆ ಕಳಿಸಬೇಕು, ವಿವಿಧ ರಾಜ್ಯಗಳಲ್ಲಿ ಇಂಥದ್ದೇ ಬೇಡಿಕೆಗಳಿದ್ದು, ಎಲ್ಲ ಕಡೆಯೂ ಅನ್ವಯವಾಗುವಂತೆ ಕೇಂದ್ರವೇ ಕಾನೂನು ಜಾರಿ ಮಾಡಲಿ ಎಂದು ತಿಳಿಸಿದರು. ಧರ್ಮಸೇನಾ ಮಾತನಾಡಿ, ನಮ್ಮ ಮೀಸಲಾತಿಯಲ್ಲೇ ಸ್ಪ ೃ್ಯರಿಗೂ ಅವಕಾಶ ನೀಡಲಾಗಿದೆ, ಈಗ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ನೀಡಿ, ಹೆಚ್ಚು ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತಿ ಎಂದು ಆಗ್ರಹಿಸಿದರು.

ಖರ್ಗೆ, ಪರಮ್ ಒಪ್ಪಿಸ್ತೇವೆ: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಜಿ.ಪರಮೇಶ್ವರ್ ಅವರನ್ನು ಈ ವಿಚಾರದಲ್ಲಿ ಒಪ್ಪಿಸುತ್ತೇವೆ, ಅವರೊಂದಿಗೆ ಖುದ್ದು ಮಾತನಾಡುತ್ತೇನೆ ಎಂದು ಕೆ.ಎಚ್.ಮುನಿಯಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆಯೋಗದ ವರದಿಗೆ ಕಾಂಗ್ರೆಸ್ ನಾಯಕರ ವಿರೋಧವಿಲ್ಲ, ಎಲ್ಲರೂ ಒಪ್ಪಿದ್ದಾರೆ. ಆದರೂ ಅವರೊಂದಿಗೆ ಮಾತನಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದರು.

ಕಾಂಗ್ರೆಸ್ ಮುಖಂಡರ ಜತೆ ಸಿದ್ದರಾಮಯ್ಯ ಸಭೆ: ಬೆಂಗಳೂರು: ಕರೊನಾ ಸೋಂಕಿನಿಂದ ಚೇತರಿಸಿಕೊಂಡ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇದೀಗ ದೈನಂದಿನ ಚಟುವಟಿಕೆಗೆ ಮರಳಿದ್ದಾರೆ. ಸೋಮವಾರ ತಮ್ಮ ಸರ್ಕಾರಿ ನಿವಾಸದಲ್ಲಿ ಕಾಂಗ್ರೆಸ್ ಮುಖಂಡರ ಜತೆಗೆ ಸಭೆ ನಡೆಸಿದ ಅವರು, ಸದ್ಯದ ರಾಜಕೀಯ ಬೆಳವಣಿಗೆ ಮತ್ತು ಮುಂದಿನ ಚಟುವಟಿಕೆ ಕುರಿತು ರ್ಚಚಿಸಿದರು. ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಉಪಚುನಾವಣೆ ಯಾವ ಸಂದರ್ಭದಲ್ಲಿ ಘೊಷಣೆ ಆಗುತ್ತದೋ ಗೊತ್ತಿಲ್ಲ. ಅಕಾಲಿಕವಾಗಿ ಸತ್ಯನಾರಾಯಣ ಮರಣ ಹೊಂದಿದ ಹಿನ್ನೆಲೆ ಉಪಚುನಾವಣೆ ಬಂದಿದೆ ಎಂದರು. ನಾನು ಎರಡೂವರೆ ವರ್ಷದಿಂದ ಸೋತಿದ್ದರು ಕೂಡ ಕ್ಷೇತ್ರ ಬಿಟ್ಟಿಲ್ಲ. ಯಾವತ್ತೂ ಜನರಪರ ಕೆಲಸಗಳನ್ನು ಮಾಡಿಕೊಂಡೇ ಬಂದಿದ್ದೇನೆ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net