

ಶ್ರೀನಗರ: ಕಾಂಗ್ರೆಸ್ ಸಾಕಷ್ಟು ಸಮಸ್ಯೆಗಳ ಬಲೆಗೆ ಸಿಲುಕಿಕೊಳ್ಳುತ್ತಿದೆ. ಈಗಾಗಲೇ ಹಲವು ರಾಜ್ಯಗಳು ಮತ್ತು ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿರುವ ಪಕ್ಷ, ರಾಜಕೀಯ ಅಂತ್ಯ ಕಾಣುತ್ತದೆ ಎಂದು ಅನೇಕರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಅದರ ಬೆನ್ನಲ್ಲೇ ಪಕ್ಷದ ಅನೇಕ ನಾಯಕರು ಒಂದಿಲ್ಲೊಂದು ವಿವಾದ, ಪ್ರಕರಣಗಳಲ್ಲಿ ಸಿಲುಕಿಕೊಳ್ಳಲಾರಂಭಿಸಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಬಹುಕೋಟಿ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಕೇಳಿಬಂದಿದೆ.
ಜಮ್ಮು ಕಾಶ್ಮೀರದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಭೂ ಹಗರಣದಲ್ಲಿ ಕಾಂಗ್ರೆಸ್ನ ಕೆಲ ನಾಯಕರು ಹೆಸರು ಕೇಳಿಬಂದಿದೆ. ಅಲ್ಲಿನ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡ ಪ್ರಕರಣದಲ್ಲಿ ಕಾಂಗ್ರೆಸ್ ಹಾಗೂ ಪಿಡಿಪಿ ಪಕ್ಷದ ನಾಯಕರು ಹಾಗೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಆಜ್ ತಕ್ ವಾಹಿನಿಯ ವರದಿ ಪ್ರಕಾರ, ಪಿಡಿಪಿ ನಾಯಕ ಮತ್ತು ಜಮ್ಮು ಕಾಶ್ಮೀರದ ಮಾಜಿ ಹಣಕಾಸು ಸಚಿವ ಹಸೀಬ್ ದರ್ಬೊ ಅವರೂ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢವಾಗಿದೆ ಎನ್ನಲಾಗಿದೆ. ಅವರ ಜತೆ ಶೆಹಜಾಡಾ ಬಾನೊ, ಎಜಾಜ್ ಹುಸೇನ್ ಮತ್ತು ಇಫ್ಇಕಾರ್ ಡಾರ್ಬೊ ಅವರ ಹೆಸರೂ ಬಹಿರಂಗವಾಗಿದೆ. ಹಾಗೂ ಕಾಂಗ್ರೆಸ್ ಮುಖಂಡ ಕೆ.ಕೆ.ಅಮ್ಲಾ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)