

ಚಂಡೀಗಢ: ಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳ ಮದುವೆಯೆಂದರೆ ಅದೆಷ್ಟು ಸಂಭ್ರಮವಿರುತ್ತದೆಯಲ್ಲವೇ. ಆದರೆ ಎಲ್ಲ ಹೆಣ್ಣು ಹೆತ್ತವರ ಕಥೆ ಒಂದೇ ರೀತಿ ಇರುವುದಿಲ್ಲ. ಕೆಲವು ತಂದೆ ತಾಯಿಯರು ಮಗಳ ಮದುವೆಗಾಗಿ ಪ್ರಾಣವನ್ನೇ ಕಳೆದುಕೊಳ್ಳುವ ಸ್ಥಿತಿಯೂ ಬಂದುಬಿಡುತ್ತದೆ. ಅಂತದ್ದೇ ಒಂದು ಘಟನೆ ಹರಿಯಾಣದಲ್ಲಿ ನಡೆದಿದೆ.
ಹರಿಯಾಣದ ರೇವಾರಿ ನಗರದ ಕುಟುಂಬವೊಂದರ ಹೆಣ್ಣು ಮಗಳ ಮದುವೆ ನವೆಂಬರ್ 20ಕ್ಕೆ ನಿಶ್ಚಯವಾಗಿತ್ತು. ಗುರುಗ್ರಾಮದ ವರನಿಗೆ ಮಗಳನ್ನು ಮದುವೆ ಮಾಡಿಕೊಡಲು ಕುಟುಂಬ ಸಿದ್ಧವಾಗುತ್ತಿತ್ತು. ಆದರೆ ಮದುವೆಗೆ ಒಂದು ದಿನವಿರುವಾಗ ಅಂದರೆ ನವೆಂಬರ್ 19ರಂದು ವಧುವಿನ ತಂದೆ ಮಗಳ ಲಗ್ನ ಪತ್ರಿಕೆಯಲ್ಲೇ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಂದೆ ಈ ರೀತಿ ಮಾಡುವುದಕ್ಕೆ ಕಾರಣ ವರನ ಮನೆಯವರೇ ಎನ್ನುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಮದುವೆಗೆ ಎರಡು ದಿನ ಬಾಕಿಯಿರುವವರೆಗೂ ಸುಮ್ಮನಿದ್ದ ವರನ ಕುಟುಂಬ ನವೆಂಬರ್ 18ಕ್ಕೆ ಹೊಸ ವರಸೆ ಆರಂಭಿಸಿದೆ. 30 ಲಕ್ಷ ರೂಪಾಯಿ ವರದಕ್ಷಿಣೆ ಕೊಡಿ, ಇಲ್ಲದಿದ್ದರೆ ನಾವು ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಆ ಕ್ಷಣಕ್ಕೆ ಏನು ಮಾಡಬೇಕೆಂದು ಅರಿಯದ ವಧುವಿನ ತಂದೆ ಹಾಗೂ ಹೀಗೂ ಮಾಡಿ 15 ಲಕ್ಷ ಹೊಂದಿಸಿದ್ದಾರೆ. ಆದರೆ ಪೂರ್ತಿ ಹಣ ಕೊಡದಿದ್ದರೆ ಮದುವೆಯಾಗಲು ಸಾಧ್ಯವೇ ಇಲ್ಲ ಎಂದು ವರನ ಕುಟುಂಬ ಪಟ್ಟು ಹಿಡಿದಿದೆ.
ನವೆಂಬರ್ 18ಕ್ಕೆ ವಧುವಿನ ತಂದೆ ಮತ್ತು ಸಂಬಧಿಯೊಬ್ಬರು ವರನ ಮನೆಗೆ ಹೋಗಿ ಈ ವಿಚಾರವಾಗಿ ಮಾತನಾಡಿದ್ದಾರೆ. ಆದರೆ ಅವರು ಅದಕ್ಕೆ ಒಪ್ಪದ ಹಿನ್ನೆಲೆ ಬೇಸರದಿಂದ ಮನೆಗೆ ಬಂದಿದ್ದಾರೆ. ನವೆಂಬರ್ 19ರಂದು ತಂದೆ ನೇಣಿಗೆ ಶರಣಾಗಿದ್ದಾರೆ. ವರದಕ್ಷಿಣೆ ಕೊಡಲಾಗದ ಹಿನ್ನೆಲೆ ಮಗಳ ಮದುವೆ ಮುರಿದುಬೀಳಲಿದೆ. ಅದನ್ನು ತಾಳಲಾರದ ನಾನು ಸಾಯುತ್ತಿದ್ದೇನೆ ಎಂದು ಲಗ್ನ ಪತ್ರಿಕೆಯಲ್ಲಿ ಬರೆದಿಟ್ಟು ಅವರು ಸಾವನ್ನಪ್ಪಿದ್ದಾರೆ. (ಏಜೆನ್ಸೀಸ್)