ನಾನು ಗರ್ಭಿಣಿ ಎನ್ನುವುದು ನನಗೇ ಗೊತ್ತಿರಲಿಲ್ಲ! ಶೌಚಕ್ಕೆ ಕೂತಾಗ ಮಗು ಬಂತು

ಐಮಿ
Published on

ಲಂಡನ್​: ಪ್ರಪಂಚದಲ್ಲಿ ಆಕಸ್ಮಿಕ ಸಾವು ಸಹಜ. ಆದರೆ ಆಕಸ್ಮಿಕ ಜನನ? ನೀವು ಸಾಧ್ಯವೇ ಇಲ್ಲವೆಂದರೂ ಇಲ್ಲೊಬ್ಬ ತಾಯಿ ಮಾತ್ರ ಸಾಧ್ಯ ಎನ್ನುತ್ತಾಳೆ. ಅಮೆರಿಕದ ಈ ಮಹಿಳೆ ತನ್ನ ಮಗುವಿಗೆ ಜನ್ಮ ನೀಡುವಾಗ ತಾನು ತುಂಬು ಗರ್ಭಿಣಿ ಎನ್ನುವ ವಿಚಾರ ಆಕೆಗೆ ಗೊತ್ತಿರಲಿಲ್ಲವಂತೆ.

ಅಮೆರಿಕದ ಐಮೀ ಸ್ಟೀವನ್ಸ್​ (18) 17 ವರ್ಷವಿದ್ದಾಗ ತನ್ನ ಮಗುವಿಗೆ ಜನ್ಮ ನೀಡಿದಳಂತೆ. ಆಕೆಯ ಪ್ರಸವದ ಕಥೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಒಂಬತ್ತು ತಿಂಗಳು ತುಂಬಿದರೂ ಆಕೆಗೆ ತಾನು ಗರ್ಭಿಣಿ ಎನ್ನುವ ವಿಚಾರವೇ ಗೊತ್ತಿರಲಿಲ್ಲವಂತೆ. ಮಗು ಜನನವಾಗುವುದಕ್ಕೆ ಮೂರು ದಿನಗಳಿದ್ದಾಗ ಆಕೆ ಆರು ವಾರಗಳ ಗರ್ಭಿಣಿ ಎಂದು ಆಕೆಗೆ ತಿಳಿಸಲಾಗಿತ್ತಂತೆ. ಹೆರಿಗೆ ಆಗುವುದಕ್ಕೂ ಮೂರು ತಿಂಗಳ ಮೊದಲು ಗರ್ಭ ನಿರೋಧಕ ಲಸಿಕೆಯನ್ನೂ ಆಕೆ ಪಡೆದಿದ್ದಳಂತೆ.

ಕಳೆದ ವರ್ಷ ಐಮೀ ತನ್ನ ಮಗುವಿಗೆ ಜನ್ಮ ನೀಡಿದ್ದಾಳೆ. ಮಧ್ಯರಾತ್ರಿಯಲ್ಲಿ ಶೌಚಕ್ಕೆ ಹೋಗಬೇಕೆನಿಸಿದ ಕಾರಣ ಆಕೆ ಶೌಚಗೃಹಕ್ಕೆ ಹೋಗಿದ್ದಾಳೆ. ಆಗ ಆಕೆಯ ಗುಪ್ತಾಂಗದಿಂದ ಎರಡು ಕಾಲು ಹೊರಬಂದಿದ್ದನ್ನು ಕಂಡು ಗಾಬರಿಗೊಂಡಿದ್ದಾಳೆ. ನಂತರ ತಾನೇ ಮಗುವನ್ನು ಎಳೆದು ಹೊರತೆಗೆದಿದ್ದಾಳೆ. ಅದಾದ ನಂತರ ತಾಯಿಯನ್ನು ಕರೆದು ವಿಷಯ ತಿಳಿಸಿದ್ದಾಳೆ. ಕೆಲವು ಪ್ರಥಮ ಚಿಕಿತ್ಸೆಯನ್ನು ಮಾಡಿದ ತಾಯಿ ಆಮೇಲೆ ಆ್ಯಂಬುಲೆನ್ಸ್​ಗೆ ಕರೆ ಮಾಡಿ, ಮಗಳು ಮತ್ತು ಮೊಮ್ಮಗುವನ್ನು ಅಸ್ಪತ್ರೆಗೆ ಕರೆದೊಯ್ದಿದ್ದಾಳೆ.

ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಮಗು 38 ವಾರಗಳ ಕಾಲ ಗರ್ಭದಲ್ಲಿದ್ದಿದ್ದಾಗಿ ಹೇಳಿದ್ದಾರೆ. ಜನನವಾಗುವಾಗ ಮಗು 2.3 ಕೆ.ಜಿ ತೂಕವಿತ್ತಂತೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದ ಹಿನ್ನೆಲೆ ಮೂರು ದಿನಗಳಲ್ಲಿ ಅವರನ್ನು ಆ್ಪತ್ರೆಯಿಂದ ಡಿಸ್ಚಾರ್ಜ್​ ಮಾಡಿ ಕಳುಹಿಸಲಾಗಿದೆ.

ಇದೀಗ ಮಗುವಿಗೆ ಒಂದು ವರ್ಷ ತುಂಬಿದೆ. ನನ್ನ ಮಗು ಹುಟ್ಟಿದ್ದನ್ನು ನೆನಪಿಸಿಕೊಂಡರೆ ಈಗಲೂ ಮೈ ಝುಂ ಅನ್ನಿಸುತ್ತದೆ. ಆದರೆ ಮಗುವಿನ ನಗು ನೋಡಿದಾಕ್ಷಣ ಸಂತಸ ಬಿಟ್ಟು ಬೇರೆಲ್ಲ ಮಾಯವಾಗುತ್ತದೆ ಎನ್ನುತ್ತಾರೆ ಐಮೀ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net