

ಬೆಂಗಳೂರು: ದೇಶಾದ್ಯಂತ ಲವ್ ಜಿಹಾದ್ ಬಗ್ಗೆ ಭಾರಿ ಚರ್ಚೆಯಾಗುತ್ತಿದ್ದಂತೆಯೇ ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಸಿಡಿದೆದ್ದಿದ್ದಾರೆ. ಶನಿವಾರ ಟ್ವಿಟ್ಟರ್ನಲ್ಲಿ ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನೇನು ಆರ್ಎಸ್ಎಸ್ ಶಾಖೆಗೆ ಹೋಗಿಲ್ಲ. ಅಲ್ಲಿ ಹೋಗಿ ಕಲಿಯುವಂತದ್ದು ಏನೂ ಇಲ್ಲ. ಆದರೆ ಅದರ ಬಗ್ಗೆ ತಿಳಿದುಕೊಂಡೇ ವಿರೋಧಿಸುತ್ತೇನೆ. ಆಡಳಿತ ನಡೆಸುವವರಿಗೆ ಸಂವಿಧಾನ ಗೊತ್ತಿರಬೇಕೇ ಹೊರೆತು ಆರ್ಎಸ್ಎಸ್ ಅಲ್ಲ. ಬಿಜೆಪಿಯ ನಾಯಕರು ಮೊದಲು ಸಂವಿಧಾನವನ್ನು ಓದಲಿ. ಬೇಕಾದರೆ ನಾನೇ ಅವರಿಗೆ ಸಂವಿಧಾನ ಪಾಠ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಅವರು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ ಮೂಲಭೂತವಾಗಿ ಸಂವಿಧಾನ ವಿರೋಧಿಗಳು. ಅದು ಮೀಸಲಾತಿ, ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಯನ್ನು ವಿರೋಧಿಸುತ್ತದೆ. ಅವರು ಮಿಲ್ಲರ್ ವರದಿಯಿಂದ ಮಂಡಲ್ ವರದಿವರಗೆ ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರು, ಮನುಸ್ಮೃತಿಗೆ ಬದ್ಧರಾಗಿರುವವರು ಎಂದು ಅವರು ಕಿಡಿ ಕಾರಿದ್ದಾರೆ.
ಲವ್ ಜಿಹಾದ್, ಗೋಹತ್ಯೆ ನಿಷೇಧದ ಮಾತುಗಳೆಲ್ಲ ತಮ್ಮ ಆಡಳಿತ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಬಿಜೆಪಿ ನಾಯಕರ ಹತಾಶ ಪ್ರಯತ್ನ. ಅವರಿಗೆ ಸಾಧನೆಯ ಬಲದಿಂದ ಚುನಾವಣೆ ಗೆಲ್ಲುವ ಆತ್ಮವಿಶ್ವಾಸ ಇಲ್ಲ. ಇದಕ್ಕಾಗಿ ಕೋಮುದ್ವೇಷ ಹುಟ್ಟಿಸಲು ಈ ಕುತಂತ್ರ ನಡೆಸುತ್ತಿದ್ದಾರೆ. ಗೋಹತ್ಯೆಯ ಬಗ್ಗೆ ಬಿಜೆಪಿಯ ನಾಯಕರದ್ದು ದಂದ್ವ ನಿಲುವು. ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಗೋಮಾಂಸ ರಫ್ತು ಹಲವು ಪಟ್ಟು ಹೆಚ್ಚಾಗಿದೆ. ಅತಿ ಹೆಚ್ಚು ಗೋಮಾಂಸ ರಫ್ತು ನಡೆಯುತ್ತಿರುವುದು ಉತ್ತರಪ್ರದೇಶದಲ್ಲಿ. ಹೆಚ್ಚಿನ ಗೋಮಾಂಸ ವ್ಯಾಪಾರಿಗಳು ಬಿಜೆಪಿಗೆ ಸೇರಿದವರು. ಗೋಹತ್ಯೆ ನಿಷೇಧ ಕಾಯ್ದೆಯ ಬಗ್ಗೆ ನಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ. ಹಿಂದಿನ ಬಿಜೆಪಿ ಸರ್ಕಾರ 1964ರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿ ಮೂಲ ಕಾಯ್ದೆಯನ್ನು ಉಳಿಸಿಕೊಂಡಿದೆ. ಈ ನಿಲುವಿಗೆ ನಾವು ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.