ಬೆಂಗಳೂರು: ಪಕ್ಷ ಬಿಟ್ಟವರನ್ನೂ ಒಳಗೊಂಡಂತೆ ಜೆಡಿಎಸ್, ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಹಲವರು ಕಾಂಗ್ರೆಸ್ ಸೇರ್ಪಡೆಗೆ ಮಾತುಕತೆ ಆಗಿದೆ. ಈ ವಿಚಾರದಲ್ಲಿ ಪಕ್ಷದ ನಾಯಕರ ನಿರ್ಧಾರ ಅಂತಿಮ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.
ಪಕ್ಷದ ಸಿದ್ಧಾಂತ ಒಪ್ಪಿ ಬರುವವರನ್ನು ಸ್ವಾಗತಿಸುತ್ತೇವೆ. ಬದಲಾವಣೆ ಎಂಬುದು ಸಹಜ. ಅದಕ್ಕೆ ಎಲ್ಲರೂ ಒಗ್ಗಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮಂಡ್ಯ ಲೋಕಸಭೆ ಚುನಾವಣೆಗೆ ಸ್ಥಳೀಯರೇ ಅಭ್ಯರ್ಥಿಯಾಗುವ ಸಾಧ್ಯತೆ ಹೆಚ್ಚಿದೆ ಎಂದರು. ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಯಾರು ಎಂಬುದನ್ನು ಅಂತಿಮ ಮಾಡಿಲ್ಲ. ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ತಮಗೆ ಜವಾಬ್ದಾರಿ ಕೊಟ್ಟಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸೂಚನೆ ಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆ ಶಾಸಕರು ಮತ್ತು ಮುಖಂಡರ ಜತೆ ಚರ್ಚಿಸಿ ಸದ್ಯದಲ್ಲೇ ಅಭ್ಯರ್ಥಿ ಆಯ್ಕೆ ಬಗ್ಗೆ ಶಿಫಾರಸ್ಸು ಮಾಡಲಾಗುವುದು ಎಂದು ಹೇಳಿದರು.
ಅಪರೂಪಕ್ಕೊಮ್ಮೆ ರಾಷ್ಟ್ರೀಯ ಮಟ್ಟದ ನಾಯಕರು ಬೇರೆಡೆ ಸ್ಪರ್ಧಿಸುತ್ತಾರೆ. ಇದು ಎಲ್ಲ ಜಿಲ್ಲೆ ಎಲ್ಲ ಸಮಯಕ್ಕೂ ಅನ್ವಯವಾಗುವುದಿಲ್ಲ. ಮಾಜಿ ಸಂಸದೆ ರಮ್ಯಾ ಹಾಗೂ ಸಂಸದೆ ಸುಮಲತಾ ಮಂಡ್ಯದವರೇ ಆಗಿದ್ದಾರೆ. ಇದುವರೆಗೂ ಸ್ಥಳೀಯ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಾಗಿದೆ. ಅಭ್ಯರ್ಥಿ ವಿಷಯದಲ್ಲಿ ಗೊಂದಲ ಇಲ್ಲ ಎಂದು ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.